ಹೆಬ್ಬಾಲೆ, ಜೂ. 21: ಇಲ್ಲಿನ ಸಮುದಾಯ ಸರ್ಕಾರಿ ಆಸ್ಪತ್ರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಸತೀಶ್, ಸದಸ್ಯರು ಭೇಟಿ ನೀಡಿ, ಅಲ್ಲಿನ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದು ಸ್ವಚ್ಛತೆಯನ್ನು ವೀಕ್ಷಿಸಿದರು.

ಆಸ್ಪತ್ರೆಯ ಔಷಧ ಉಗ್ರಾಣ ಕೊಠಡಿ, ಪ್ರಯೋಗಾಲಯ, ಶೌಚಾಲಯ, ಹಾಗೂ ಒಳರೋಗಿಗಳ ಕೊಠಡಿ ಅಸ್ವಚ್ಛತೆಯಿಂದ, ಕಸ-ಕಡ್ಡಿಗಳಿಂದ ಕೂಡಿದ್ದರಿಂದ ಸಿಬ್ಬಂದಿಗಳ ಬೇಜವಾಬ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿದ್ದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೆ.ಕೆ. ಲೀಲಾವತಿ, ಶುಶ್ರೂಷಕಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಸುತ್ತಮುತ್ತ ಬೆಳೆದಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು. ಮುಂಭಾಗದಲ್ಲಿ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸುವಂತೆ ತಿಳಿಸಿದರು.

ಡೆಂಗಿ ಜ್ವರ ಹಾಗೂ ಇನ್ನಿತರ ರೋಗಗಳ ಬಗ್ಗೆ ಮಾಹಿತಿ ತಿಳಿಸುವ ಆಸ್ಪತ್ರೆಯ ಸಿಬ್ಬಂದಿಗಳೇ ಆಸ್ಪತ್ರೆಯ ಶÀುಚಿತ್ವ ಕಾಪಾಡುತ್ತಿಲ್ಲ. ಸಾರ್ವಜನಿಕರಿಗೆ ಏನು ಮಾಹಿತಿ ಕೊಡುವಿರಿ ಎಂದು ಸಿಬ್ಬಂದಿಗಳನ್ನು ಪ್ರಶ್ನಿಸಿದರು.

ಆದಷ್ಟು ಬೇಗ ವೈದ್ಯರ ಹಾಗೂ ಸಿಬ್ಬಂದಿಗಳ ನೇಮಕ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು ಎಂದು ಲತಾ ತಿಳಿಸಿದರು. ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಮಧುಸೂಧನ್, ಪ್ರಮೀಳ, ಪದ್ಮ ಹಾಜರಿದ್ದರು.