ಕೂಡಿಗೆ, ಜು. ೬: ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ಚಿಕ್ಲಿಹೊಳೆ ಅಣೆಕಟ್ಟೆಯ ಹಿನ್ನೀರಿನಿಂದ ಸಮೀಪದ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಉಪ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನದ ಅಡಿಯಲ್ಲಿ ರೂ. ೩ ಕೋಟಿ ವೆಚ್ಚದ ಕಾಮಗಾರಿಯು ಚಿಕ್ಲಿಹೊಳೆ ಸಮೀಪದಲ್ಲಿ ನಡೆಯುತ್ತಿದ್ದು, ಈಗಾಗಲೇ ಕಾಮಗಾರಿಯು ಶೇ. ೯೦ ರಷ್ಟು ಪ್ರಗತಿ ಸಾಧಿಸಿದೆ.

ಚಿಕ್ಲಿಹೊಳೆಯ ಅಣೆಕಟ್ಟೆಯ ಹಿನ್ನೀರಿನ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಅಣೆಕಟ್ಟೆಯ ಸಮೀಪದಲ್ಲಿ ನೀರು ಸರಬರಾಜು ಮಾಡುವ ನೂತನ ತಂತ್ರಜ್ಞಾನದ ಯಂತ್ರಗಳ ಅಳವಡಿಕೆ ಮತ್ತು ಅಣೆಕಟ್ಟೆಯಿಂದ ನೀರು ನೇರವಾಗಿ ಶುದ್ಧೀಕರಣ ಘಟಕದ ಕೇಂದ್ರಕ್ಕೆ ಬಂದು ಅಲ್ಲಿ ನೀರು ಶುದ್ಧಗೊಂಡು ಬೃಹತ್ ಪ್ರಮಾಣದ ಪೈಪ್‌ಗಳ ಮೂಲಕ ಹೊಸಕೋಟೆ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ನೀರು ಸಂಗ್ರಹದ ಟ್ಯಾಂಕ್‌ನಲ್ಲಿ ನೀರು ಸಂಗ್ರಹ ಮಾಡಲಾಗುತ್ತಿದೆ. ಉಪ ಗ್ರಾಮಗಳಿಗೆ ಸೇರಿದಂತೆ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಈ ಯೋಜನೆಯು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವತಿಯಿಂದ ನಡೆಯುತ್ತಿದೆ. ಅಣೆಕಟ್ಟೆಯಿಂದ ನೀರು ಶುದ್ಧೀಕರಣ ಘಟಕಕ್ಕೆ ಬಂದು ಬೀಳಲು ಜಾಕ್‌ವೆಲ್ ಯಂತ್ರಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಈ ಯೋಜನೆಗೆ ಕೇಂದ್ರ ಸರಕಾರದ ಶೇ. ೬೦ ಭಾಗ ಅನುದಾನ ಮತ್ತು ರಾಜ್ಯ ಸರ್ಕಾರದ ಶೇ. ೪೦ ರ ಅನುದಾನವನ್ನು ಬಳಕೆ ಮಾಡಿಕೊಂಡು ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧,೫೦೦ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಸೋಮವಾರಪೇಟೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೀರೇಂದ್ರ ಕುಮಾರ್ ಮಾಹಿತಿಯಿತ್ತಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.