ವೀರಾಜಪೇಟೆ, ಜು. ೮: ಪಟ್ಟಣದ ಕೆಲವು ಕಡೆಗಳಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಪಟ್ಟಣದ ಮುಖ್ಯ ರಸ್ತೆಯಲ್ಲಿಯೆ ಎಲ್ಲೆಂದರಲ್ಲಿ ಕಸ ಬಿಸಾಕುವವರಿಗೆ ದುಪ್ಪಟ್ಟು ದಂಡ ವಿಧಿಸಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಸೂಚಿಸಿದರು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಕೊಡಗು ಅಂತರರಾಷ್ಟಿçಯ ಮಟ್ಟದಲ್ಲಿ ಪ್ರವಾಸಿತಾಣವಾಗಿ ಗುರುತಿಸಿಕೊಂಡಿದೆ. ನಾವು ಶುಚಿತ್ವಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ. ಆದರೆ ಪಟ್ಟಣದಲ್ಲಿ ತೀವ್ರ ರೀತಿಯಲ್ಲಿ ಶುಚಿತ್ವದ ಸಮಸ್ಯೆ ಕಾಣುತ್ತಿದೆ. ಈ ಹಿಂದೆ ಕಟ್ಟುನಿಟ್ಟಾಗಿ ಶುಚಿತ್ವ ನಿರ್ವಹಣೆ ನಡೆಯುತ್ತಿತ್ತು. ಇದೀಗ ಎಲ್ಲೆಂದರಲ್ಲಿ ಬೀದಿಯಲ್ಲಿ ಕಸಗಳು ಕಾಣುತ್ತಿದ್ದು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಿ ಕೆಲಸ ಮಾಡಬೇಕಿದೆ. ದಂಡದ ಮೊತ್ತವನ್ನು ಹೆಚ್ಚಿಸಿ ಗರಿಷ್ಠ ಮೊತ್ತದ ದಂಡ ವಿಧಿಸುವ ಕ್ರಮವನ್ನು ಜಾರಿಗೆ ತರುವಂತೆ ಸೂಚಿಸಿದರು. ಇದಕ್ಕೆ ಸಭೆ ಒಪ್ಪಿಗೆ ಸೂಚಿಸಿ ರಸ್ತೆಯಲ್ಲಿ ಕಸ ಬಿಸಾಕುವವರಿಗೆ ದುಪ್ಪಟ್ಟು ದಂಡ ವಿಧಿಸಲು ನಿರ್ಣಯ ಕೈಗೊಂಡಿತು.

ಸಭೆಯ ಆರಂಭದಲ್ಲಿ ಕಾಂಗ್ರೆಸ್ ಸದಸ್ಯ ಸಿ.ಕೆ ಪ್ರಥ್ವಿನಾಥ್ ಮಾತನಾಡಿ ಪಟ್ಟಣದ ಮುಖ್ಯ ತೋಡಿನ ೧೫ ಕೀ.ಮೀ ಹೂಳೆತ್ತುವ ಕೆಲಸಕ್ಕೆ ಕ್ರೀಯಾಯೋಜನೆ ರೂಪಿಸಲಾಗಿದೆ. ಆದರೆ ಪಟ್ಟಣದ ಸುತ್ತಳತೆ ಏಳುವರೆ ಕೀ.ಮಿ ಮಾತ್ರ ಇದೆ. ಯಂತ್ರದ ಮೂಲಕ ಮೂರು ತಿಂಗಳು ಸತತವಾಗಿ ಕೆಲಸ ನಿರ್ವಹಿಸಿದರೂ ೧೦ ಲಕ್ಷ ಸಂಪೂರ್ಣ ಬಳಕೆ ಆಗುವುದಿಲ್ಲ. ಇಲ್ಲಿ ವ್ಯಾಪಕ ಭ್ರಷ್ಠಚಾರ ನಡೆದಿದೆ ಎಂದು ಆರೋಪಿಸಿದರು. ಈ ವಿಚಾರದಲ್ಲಿ ಸ್ವಪಕ್ಷೀಯ ಸದಸ್ಯರಿಂದ ಏರಿದ ಧ್ವನಿಯಲ್ಲಿ ಚರ್ಚೆ ನಡೆದು ಸದಸ್ಯರಾದ ರಾಫಿ, ರಂಜಿ, ಮತೀನ್, ರಾಜೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯ ರಾಜೇಶ್ ಮಾತನಾಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್ ಅವರನ್ನು ಸ್ಥಾಯಿ ಸಮಿತಿ ಸಭೆಗೆ ಆಹ್ವಾನಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅಧ್ಯಕ್ಷರು ಮಾಹಿತಿ ನೀಡಿ ಕೆಲವು ಅನಾನುಕೂಲತೆಯಿಂದ ಸ್ಥಾಯಿ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ನಂತರದ ಸಭೆಗೆ ಆಹ್ವಾನ ನೀಡಲಾಗಿದೆ. ಅವರು ನೀಡಲಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದಾಗ ಇತರ ಸದಸ್ಯರಾದ ರಂಜಿ ಪೂಣಚ್ಚ, ರಾಫಿ ಸಭೆಗೆ ನಮಗೂ ಮಾಹಿತಿ ನೀಡಿಲ್ಲ. ಇಂತಹ ಸ್ಥಾಯಿ ಸಮಿತಿ ನಮಗೆ ಅಗತ್ಯ ಇಲ್ಲ. ಸಮಿತಿಯನ್ನು ವಿಸರ್ಜಿಸಿ ಎಂದು ಒತ್ತಾಯಿಸಿದಾಗ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಧ್ಯ ಪ್ರವೇಶಿಸಿ ಚುನಾವಣೆಗೆ ಕೇವಲ ಮೂರು ತಿಂಗಳು ಮಾತ್ರ ಬಾಕಿ ಇದೆ. ಅನಾವಶ್ಯಕ ಕಾಲಹರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಕಡೆ ಒತ್ತು ನೀಡಿ ಎಂದು ಸೂಚಿಸಿದರು.

ಮಲಬಾರ್ ರಸ್ತೆಗೆ ಕಂಚಿಕಾಮಾಕ್ಷಿ ಎಂದು ನಾಮಕರಣ ಮಾಡಿರುವ ವಿಚಾರದಲ್ಲಿ ವಾರ್ಡ್ ಸದಸ್ಯರಾದ ಮಂಡೇಪAಡ ವಿನಾಂಕ್ ಕುಟ್ಟಪ್ಪ ಮಾತನಾಡಿ ರಸ್ತೆಗೆ ಹೆಸರನ್ನು ನಾಮಕರಣ ಮಾಡುವಾಗ ವಾರ್ಡ್ ಸದಸ್ಯನಾದ ತನ್ನ ಗಮನಕ್ಕೆ ಹಾಗೂ ಅಲ್ಲಿನ ಸ್ಥಳೀಯರ ಗಮನಕ್ಕೆ ತಂದಿಲ್ಲ. ವಾಸ್ತವವಾಗಿ ಅಲ್ಲಿ ಶ್ರೀ ಮುತ್ತಪ್ಪ ದೇವಾಲಯ ಇದ್ದು ಅದರ ಹೆಸರನ್ನು ಈ ರಸ್ತೆಗೆ ನಾಮಕರಣ ಮಾಡುವಂತೆ ದೇವಾಲಯ ಸಮಿತಿ ಮತ್ತು ಆ ಜನಾಂಗದವರು ಆಗ್ರಹಿಸುತ್ತಿದ್ದಾರೆ. ದಯವಿಟ್ಟು ಸಭೆ ಜನರ ಭಾವನೆಯನ್ನು ಗೌರವಿಸಿ ಮುತ್ತಪ್ಪ ರಸ್ತೆ ಎಂದು ನಾಮಕರಣ ಮಾಡಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ನಾನು ಕೂಡ ಅಲ್ಲಿಯ ನಿವಾಸಿಯಾಗಿದ್ದು ಎಲ್ಲಾ ದೇವರುಗಳ ಬಗ್ಗೆ ಗೌರವವಿದೆ. ಅಲ್ಲಿನ ನಿವಾಸಿಗಳ ಕೋರಿಕೆಯಂತೆ ಮುತ್ತಪ್ಪ ಕಂಚಿ ಕಾಮಾಕ್ಷಿ ರಸ್ತೆ ಎಂದು ಹೆಸರಿಡುವಂತೆ ಸಲಹೆ ನೀಡಿದರು.

ಈ ವಿಚಾರದಲ್ಲಿ ಕಂಚಿ ಕಾಮಾಕ್ಷಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗು ಪುರಸಭೆ ನಾಮಕರಣ ಸದಸ್ಯ ಜಿ.ಜಿ. ಮೋಹನ್ ಮಾತನಾಡಿ, ನಮ್ಮ ಜನಾಂಗದವರು ಆದಿ ಕಾಲದಿಂದ ಈ ಭಾಗದಲ್ಲಿ ವಾಸಿಸುತ್ತಿದ್ದು ಕಂಚಿ ಕಾಮಾಕ್ಷಿ ದೇವಿಯ ಆರಾಧನೆ ನಡೆಸುತ್ತಿರುವುದರಿಂದ ನಮ್ಮ ಬೇಡಿಕೆಯಂತೆ ಆ ದೇವಿಯ ಹೆಸರನ್ನೆ ರಸ್ತೆಗೆ ಇಟ್ಟಿರುವುದು ಸೂಕ್ತವಾಗಿದೆ. ಯಾವುದೇ ರಾಜಕೀಯ ಬೇಡ ನಮ್ಮ ಭಾವನೆಗಳನ್ನು ಗೌರವಿಸಿ ಎಂದು ಹೇಳಿದರು. ಈ ವಿಚಾರದಲ್ಲಿ ಗೋದಲ ಏರ್ಪಟ್ಟ ಕಾರಣ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಪುರಸಭೆಯ ನಿಯಮಾನುಸಾರ ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಕೊಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ೭ ಏಕರೆ ಜಾಗವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಒದಗಿಸಿಕೊಟ್ಟ ರಾಜ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ ಅವರ ಕಾರ್ಯಸಾಧನೆ ಕೊಡಗಿನ ಜನರಿಗೆ ಹೆಮ್ಮೆಯ ವಿಚಾರ. ಇದಕ್ಕೆ ವಂದನಾ ನಿರ್ಣಯವನ್ನು ಅವರಿಗೆ ಕಳುಹಿಸಿ ಕೊಡುವಂತೆ ಸದಸ್ಯ ರಾಫಿ ಹೇಳಿದರು. ಇದಕ್ಕೆ ಪೂರಕವಾಗಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಕೊಡವರ ಅಭಿವೃದ್ದಿಗಾಗಿ ಬೆಂಗಳೂರು ಕೊಡವ ಸಮಾಜಕ್ಕೆ ಸಮಾಜಮುಖಿ ಕೆಲಸಕ್ಕಾಗಿ ೭ ಏಕರೆ ಜಾಗವನ್ನು ಒಂದು ಕೋಟಿಗೆ ಒದಗಿಸಿಕೊಟ್ಟಿರುವುದು ಪ್ರಶಂಸನೀಯ ಕಾರ್ಯ ಎಂದರು. ಇದರಂತೆ ಪುರಸಭೆ ನಿರ್ಣಯ ಅಂಗೀಕರಿಸಿತು.

ಉಳಿದಂತೆ ಬೀದಿದೀಪ, ಕುಡಿಯುವ ನೀರು, ಒಳಚರಂಡಿ ಸ್ವಚ್ಚತೆ, ಕೆಲವು ವಾರ್ಡ್ಗಳಲ್ಲಿ ಆರಂಭಿಸಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಫಸಿಹಾ ತಬುಸಂ, ಮುಖ್ಯಾಧಿಕಾರಿ ಪಟ್ಟಚರವಂಡ ನಾಚಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಜಲೀಲ್, ಪೂರ್ಣಿಮಾ, ಅಭಿಯಂತರ ಹೇಮಕುಮಾರ್, ಪರಿಸರ ಅಭಿಯಂತರ ರೀತು ಸಿಂಗ್ ಉಪಸ್ಥಿತರಿದ್ದರು.