ವೀರಾಜಪೇಟೆ, ಜು. ೧೧: ವೀರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಅಕ್ರಮವಾಗಿ ಪ್ಲಾಸ್ಟಿಕ್ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು, ಸುಮಾರು ೨೦ ಕೆಜಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಹಾಗೂ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
ಪುರಸಭೆಯ ಪರಿಸರ ಅಭಿಯಂತರರಾದ ರೀತು ಸಿಂಗ್ ಹಾಗೂ ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಪ್ರತಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಕಳೆದ ಎರಡು ವರ್ಷಗಳ ಹಿಂದೆಯೇ ಪಟ್ಟಣದಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿದ್ದರೂ, ಬಹುತೇಕ ವರ್ತಕರು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಹಲವು ಬಾರಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಜಾಗೃತಿ ಮೂಡಿಸಿ, ನೋಟೀಸ್ ನೀಡಲಾಗಿತ್ತು.
ಆದರೂ ಪ್ಲಾಸ್ಟಿಕ್ ಮಾರಾಟ ನಿಲ್ಲದಿರುವುದರಿಂದ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿ, ಮಾಲೀಕರಿಗೆ ಸೂಚನೆ ನೀಡಿ, ಮಾರಾಟ ಮಾಡುವುದು ಕಂಡುಬAದಲ್ಲಿ ದಂಡ ವಿಧಿಸಲಾಗುತ್ತದೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ ಮಳಿಗೆಗಳ ಮೇಲೆ ನಿರಂತರವಾಗಿ ಪರಿಶೀಲಿನೆ ಮಾಡಿ ದಂಡ ವಿಧಿಸಿ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಸಾರ್ವಜನಿಕರು ಪರಿಸರಕ್ಕೆ ಹಾನಿ ಉಂಟು ಮಾಡುವಂತಹ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು, ಪುರಸಭೆಯ ಜೊತೆ ಕೈ ಜೋಡಿಸಬೇಕು ಎಂದು ಪರಿಸರ ಅಭಿಯಂತರರಾದ ರೀತು ಸಿಂಗ್ ಎಚ್ಚರಿಸಿದರು. ಮಾಂಸ ಮಾರುಕಟ್ಟೆಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಇರುವ ಅಂಗಡಿ ಮಳಿಗೆಗಳಲ್ಲಿ ಪರಿಶೀಲಿಸಿ ೨೦ ಕೆಜಿ ಪ್ಲಾಸ್ಟಿಕ್ ಬ್ಯಾಗ್ಗಳನ್ನು ವಶ ಪಡಿಸಿಕೊಂಡು ನಾಶ ಪಡಿಸಿದರು.
ನಿರ್ದಾಕ್ಷಿಣ್ಯ ಕ್ರಮ
ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ನಡೆಯುತ್ತಿದೆ. ನಿಷೇಧದ ಹಿನ್ನೆಲೆಯಲ್ಲಿ, ಅಂಗಡಿಗಳಿಗೆ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿರುವ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಲಾಗಿದೆ. ಮುಂದೆ ನಿಯಮ ಮೀರಿದರೆ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೀತು ಸಿಂಗ್ ಎಚ್ಚರಿಸಿದ್ದಾರೆ.