ಮಡಿಕೇರಿ, ಜು. ೧೧: ವೀರಾಜಪೇಟೆ ಕ್ಷೇತ್ರದ ೧೫೯೦ ಫಲಾನುಭವಿಗಳಿಗೆ ಹಕ್ಕುಪತ್ರ ಸಹಿತ ನಿವೇಶನ ಒದಗಿಸಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ವೀರಾಜಪೇಟೆ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ ನೀಡಲು ಇದುವರೆಗೂ ಸಾಧ್ಯವಾಗಿಲ್ಲ. ಈ ಎರಡು ವರ್ಷದಲ್ಲಿ ವಸತಿ ಯೋಜನೆ, ಹಕ್ಕು ಪತ್ರ ನೀಡದಿರುವ ಕುರಿತು ಬೇಸರವಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ, ಕಂದಾಯ, ಐಟಿಡಿಪಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇನೆ. ನಿವೇಶನ ಒದಗಿಸಬೇಕೆಂಬ ದೃಷ್ಟಿಯಲ್ಲಿ ಕ್ಷೇತ್ರದಲ್ಲಿ ಅಭಿಯಾನ ಕೈಗೊಂಡು ಹಕ್ಕುಪತ್ರ ವಿತರಣೆಗೆ ಮುಂದಾಗಿದ್ದೇವೆ ಎಂದರು.

ಸರಕಾರಿ ಭೂಮಿಯನ್ನು ಸ್ವಾದೀನಕ್ಕೆ ತೆಗೆದುಕೊಳ್ಳಲಾಗಿದೆ. ಕ್ಷೇತ್ರದ ಮೂರು ತಾಲೂಕಿನಲ್ಲಿಯೂ ಸರಕಾರಿ ಜಾಗವನ್ನು ಗುರುತಿಸಲಾಗಿದೆ. ೨-೩ ತಿಂಗಳಿನಲ್ಲಿ ಅಭಿಯಾನ ಪೂರ್ಣಗೊಳಿಸಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರನ್ನು ಕರೆಸಿ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ. ೨ ಸಾವಿರ ಮಂದಿಗೆ ಹಕ್ಕು ಪತ್ರ ನೀಡಲಾಗುವುದು ಎಂದ ಅವರು, ಅರಣ್ಯ ಹಕ್ಕು ಕಾಯಿದೆಯಡಿ ಹಕ್ಕುಪತ್ರ ಪಡೆಯಲು ಸಾಧ್ಯವಾಗದವರು ಲೈನ್‌ಮನೆ ನಿವಾಸಿಗಳಾಗಿರುವ ಹಿನ್ನೆಲೆ ಮೊದಲ ಹಂತದಲ್ಲಿ ೧೫೯೦ ಲೈನ್‌ಮನೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ನಿವೇಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು. ನಿವೇಶನ ನೀಡಲು ಭೂಮಿ ಗುರುತಿಸಲಾಗಿದೆ. ಕೆಲವು ಕಡೆ ಅರಣ್ಯ ಇಲಾಖೆಯಿಂದ ಅಡ್ಡಿ ಇದೆ. ಸಾವಿರ ನಿವೇಶನವಂತೂ ನೀಡಲು ಸಿದ್ಧರಿದ್ದೇವೆ. ಕಾನೂನು ತೊಡಕು ಇಲ್ಲದಿದ್ದರೆ ಎಲ್ಲರಿಗೂ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿವೇಶನ ಹಂಚಿಕೆ : ರಾಜೀವ್ ಗಾಂಧಿ ವಸತಿ ನಿಗಮದ ನಿಯಮ ಅನ್ವಯ ೨೦x೩೦ ಅಳತೆಯ ಜಾಗವನ್ನು ನೀಡಲಾಗುವುದು. ಸದ್ಯಕ್ಕೆ ಐಟಿಡಿಪಿ ಇಲಾಖೆಗೆ ಜಾಗ ವರ್ಗಾವಣೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಬೇರೆ ಜನಾಂಗ, ಬಡವರಿಗೂ ನಿವೇಶನ ನೀಡುವ ಕೆಲಸವಾಗುತ್ತದೆ. ಈ ನಿಟ್ಟಿನಲ್ಲಿ ಪಂಚಾಯಿತಿಗಳಲ್ಲಿ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಬೇಕು. ಆದಿವಾಸಿಗಳಿಗೆ ಬೇಕಾದ ಜಾಗ ಹೊರತುಪಡಿಸಿ ೧೧೦ ಎಕರೆ ಜಾಗದ ಅವಶ್ಯಕತೆ ಕ್ಷೇತ್ರದಲ್ಲಿದ್ದು, ಇದನ್ನು ಗುರುತಿಸುವುದು ಅಸಾಧ್ಯವಾಗಿದೆ ಎಂದು ಪೊನ್ನಣ್ಣ ಹೇಳಿದರು.

ಕಾಡಾನೆ ಹಾವಳಿ ತಡೆಗೆ ಯೋಜನೆ :ಕಾಡಾನೆ ಹಾವಳಿ ತಡೆಗೆ ತಿತಿಮತಿ, ಮಾಯಮುಡಿ ಭಾಗದಲ್ಲಿ ಪ್ರಾಯೋಗಿಕ ಯೋಜನೆ ಕೈಗೊಳ್ಳಲಾಗಿದೆ ಎಂದು ಪೊನ್ನಣ್ಣ ಮಾಹಿತಿ ನೀಡಿದರು. ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ)

ಕಾಡಾನೆಗಳನ್ನು ಕಾಡಿಗಟ್ಟಿ ಅವುಗಳು ಮರಳಿ ಬಾರದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಸದ್ಯಕ್ಕೆ ತಿತಿಮತಿ, ಮಾಯಮುಡಿ ಭಾಗದಲ್ಲಿ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ. ಕಾರ್ಯಾಚರಣೆಗೆ ಪೂರಕವಾಗಿ ವಾಹನಗಳನ್ನು ಗುರುತಿಸಲಾಗಿದೆ. ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕಳೆದ ೨ ದಿನಗಳಿಂದ ಕಾರ್ಯಾಚರಣೆ ಮಾಡಲಾಗುತ್ತಿದೆ. ಈಗಾಗಲೇ ಕಾಡಾ ನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಒಂದು ಹಿಂಡು ಕಾಡು ಸೇರಿದೆ. ಹಂತ ಹಂತವಾಗಿ ಎಲ್ಲಾ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸ ವಾಗುತ್ತದೆ. ಈ ೩ ತಿಂಗಳ ಅವಧಿಯಲ್ಲಿ ಆನೆಗಳಿಗೆ ಬೇಕಾಗಿರುವ ಆಹಾರ ತೋಟಗಳಲ್ಲಿ ಸಿಗುವ ಹಿನ್ನೆಲೆ ಹೆಚ್ಚಾಗಿ ಬರುತ್ತಿವೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಜಿಲ್ಲಾಧ್ಯಕ್ಷ ಪಿ.ಕೆ. ಪೊನ್ನಪ್ಪ ಹಾಜರಿದ್ದರು. ಸರಕಾರಿ ಜಾಗಗಳಲ್ಲಿ ಶೆಡ್ ನಿರ್ಮಾಣ ಮಾಡುವ ಕೆಲಸ ಯಾರೂ ಮಾಡಬಾರದು ಎಂದು ಎ.ಎಸ್. ಪೊನ್ನಣ್ಣ ಮನವಿ ಮಾಡಿದರು.

ಕ್ಷೇತ್ರದ ಹಲವೆಡೆ ಶೆಡ್ ನಿರ್ಮಾಣ ಪ್ರಕರಣ ಗಳು ಕಂಡು ಬರುತ್ತಿವೆ. ಇವುಗಳನ್ನು ಕಂದಾಯ ಇಲಾಖೆ ತೆರವು ಮಾಡಿದೆ. ನಿವೇಶನ ರಹಿತರಿಗಾಗಿ ಜಾಗ ಗುರುತಿಸುವ ಕೆಲಸ ವಾಗುತ್ತಿದೆ. ನಿವೇಶನ ನೀಡು ವುದು ನಮ್ಮ ಆದ್ಯತೆಯಾಗಿದೆ. ನಿವೇಶನ ರಹಿತರು ತಾಳ್ಮೆಯಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.