ಕೂಡಿಗೆ, ಜು. ೧೧: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಬAಧವು ಸಂವೇದನಾಶೀಲವಾದುದು, ಮನುಷ್ಯನಿಗಿರುವಷ್ಟೇ ಸ್ವಾತಂತ್ರ್ಯ ಮತ್ತು ಸಮಾನ ಹಕ್ಕುಗಳು ಈ ಭೂಮಿಯಲ್ಲಿ ಜೀವಿಸುತ್ತಿರುವ ಪ್ರಾಣಿ ಸಂಕುಲಕ್ಕೂ ಇದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಿಸಿದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಕೊಡಗು ವಿಶ್ವವಿದ್ಯಾಲಯ, ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರಾಣಿ-ಜನ್ಯರೋಗಗಳ ದಿನದ ಅಂಗವಾಗಿ ವನ್ಯಜೀವಿ ಪ್ರಾಣಿಜನ್ಯ ರೋಗಗಳು ವಿಷಯದ ಕುರಿತಾದ ಒಂದು ದಿನದ ಕಾರ್ಯಾಗಾರವನ್ನು ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಕೇಂದ್ರದ ಆವರಣದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಹರಡುವ ಪ್ರಾಣಿಜನ್ಯ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ ೬ ರಂದು ಪ್ರಾಣಿಜನ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ.
ಪಶುವೈದ್ಯಕೀಯ ವೃತ್ತಿಯು ಪ್ರಾಣಿಗಳ ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಸಾರ್ವಜನಿಕ ಆರೋಗ್ಯದ ರಕ್ಷಣೆಗೆ ಮೀಸಲಾಗಿರುವ ಒಂದು ಉದಾತ್ತ ಮತ್ತು ಅತ್ಯಗತ್ಯ ಕ್ಷೇತ್ರವಾಗಿದೆ. ಪಶುವೈದ್ಯರು ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಚಿಕಿತ್ಸೆ ನೀಡುವುದಷ್ಟೇ ಅಲ್ಲದೇ ವನ್ಯ ಜೀವಿಗಳಿಂದ ಮನುಷ್ಯನಿಗೆ ಹರಡಬಹುದಾದ ಜನ್ಯರೋಗಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಪರಿಸರದ ಸಮತೋಲನ ಮತ್ತು ಸಾಮರಸ್ಯದ ಭವಿಷ್ಯಕ್ಕಾಗಿ ಪ್ರಾಣಿಗಳೊಂದಿಗೆ ಸಹಾನುಭೂತಿಯ ಸಂಬAಧವನ್ನು ಮನುಷ್ಯ ಕಾಪಾಡಿಕೊಳ್ಳಬೇಕು. ಮನುಷ್ಯ ತನ್ನ ಸುತ್ತಣ ಪರಿಸರದಲ್ಲಿರುವ ವನ್ಯ ಜೀವಿಗಳ ಆರೈಕೆ ಮತ್ತು ರಕ್ಷಣೆ ಅವುಗಳ ಸಂರಕ್ಷಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದರು.
ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಕೊಡಗಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಂ.ಸಿ. ಶಿವಕುಮಾರ್ ಅವರು, ಏಕ ಆರೋಗ್ಯ ಎನ್ನುವುದು ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ ಮತ್ತು ಪರಿಸರ ಆರೋಗ್ಯದ ಪರಸ್ಪರ ಸಂಬAಧವನ್ನು ಗುರುತಿಸುವ ಸಹಯೋಗಿ ಮತ್ತು ಸಂಯೋಜಿತ ಪರಿಕಲ್ಪನೆಯಾಗಿದೆ. ಜನರ ಯೋಗಕ್ಷೇಮವು ಪ್ರಾಣಿಗಳ ಆರೋಗ್ಯ ಮತ್ತು ಅವುಗಳು ಹಂಚಿಕೊಳ್ಳುವ ಪರಿಸರ ವ್ಯವಸ್ಥೆಗಳೊಂದಿಗೆ ನಿಕಟ ಸಂಬAಧವನ್ನು ಹೊಂದಿದೆ ಎಂದರು.
ವಿಶ್ವವಿದ್ಯಾಲಯದ ಕುಲಸಚಿವರು ಡಾ. ಸುರೇಶ ಎಂ. ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹಾಸನದ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಾಗಪ್ಪ, ಸಹ ಪ್ರಾಧ್ಯಾಪಕರುಗಳಾದ ಡಾ. ಪ್ರಲ್ಹಾದ್ ಡಾ. ಗಿರೀಶ್ ಬಿ.ಸಿ ವಿಷಯ ಮಂಡಿಸಿದರು.
ಕಾರ್ಯಾಗಾರದಲ್ಲಿ ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿನ ವಿವಿಧ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಕೊಡಗಿನ ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿ ಶ್ರಮಿತಾ ಐಮುಡಿಯಂಡ ನಿರ್ವಹಿಸಿದರು. ಉಪನ್ಯಾಸಕ ಡಾ. ಜಮೀರ್ ಅಹಮದ್ ಸ್ವಾಗತಿಸಿದರು, ವನ್ಯಜೀವಿ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ಎನ್.ಟಿ. ಪ್ರಶಾಂತ್ ವಂದಿಸಿದರು.