ಮಡಿಕೇರಿ, ಜು. ೧೧: ದುಸ್ಥಿತಿಯಲ್ಲಿರುವ ಜಿಲ್ಲೆಯ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಅನುದಾನವನ್ನು ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದ ಹಲವು ರಸ್ತೆಗಳು ಹಾಳಾಗಿವೆ. ಗ್ರಾಮೀಣ ಭಾಗದ ರಸ್ತೆಗಳು ತೀವ್ರ ದುಸ್ಥಿತಿಯಲ್ಲಿ ಕೂಡಿರುವುದು ಗಮನಕ್ಕೆ ಬಂದಿದೆ. ಈ ಸಂಬAಧ ಈಗಾಗಲೇ ಅಗತ್ಯ ಅನುದಾನದ ಲಭ್ಯತೆ ಇದ್ದು, ಮತ್ತಷ್ಟು ಅನುದಾನವನ್ನು ಸರಕಾರದ ಮಟ್ಟದಿಂದ ಬಿಡುಗಡೆಗೊಳಿಸಲಾಗುವುದು. ಲೋಕೋಪಯೋಗಿ, ಪಂಚಾಯತ್ ರಾಜ್ ವಿಭಾಗದ ಗುಂಡಿಬಿದ್ದ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸಬೇಕು. ಸಂಚಾರಕ್ಕೆ ಯಾವುದೇ ಸಮಸ್ಯೆ ಉಂಟಾಗದAತೆ ಗಮನಹರಿಸಬೇಕು ಎಂದರು.

ಲೋಕೋಪಯೋಗಿ ಇಲಾಖೆ ಅಭಿಯಂತರ ಇಬ್ರಾಹಿಂ ಮಾತನಾಡಿ, ಮಳೆಯಿಂದ ಹಾನಿಗೀಡಾದ ರಸ್ತೆಗಳಿಗೆ ‘ವೆಟ್‌ಮಿಕ್ಸ್’ ಹಾಕಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಮಳೆ ಇರುವುದರಿಂದ ವೆಟ್‌ಮಿಕ್ಸ್ ಕಿತ್ತು ಬರುತ್ತಿದೆ. ಇದಕ್ಕಾಗಿ ರೂ. ೫ ಕೋಟಿ ಅನುದಾನ ಅವಶ್ಯಕತೆಯಿದೆ ಎಂದು ಗಮನ ಸೆಳೆದರು.

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ರಸ್ತೆ ಸಮಸ್ಯೆಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದು, ಅಗತ್ಯ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ತುರ್ತು ಕೆಲಸಗಳಿಗೆ ಎನ್‌ಡಿಆರ್‌ಎಫ್ ಅಡಿ ರೂ. ೪ ಕೋಟಿ ಅನುದಾನದ ಲಭ್ಯತೆ ಇದೆ. ಇದನ್ನು ರಸ್ತೆ ದುರಸ್ತಿಗೆ ನೀಡಲಾಗುವುದು. ಮಳೆ ನಿಲ್ಲುವ ತನಕ ಕಾಯದೆ ದುಸ್ಥಿತಿಯಲ್ಲಿರುವ ರಸ್ತೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಲಸಗಳಿಗೆ ವೇಗ ನೀಡಿ

ರೂ. ೫ ಲಕ್ಷಕ್ಕಿಂತ ಕಡಿಮೆ ಮೊತ್ತದ ಕೆಲಸವನ್ನು ನೇರವಾಗಿ ಗುತ್ತಿಗೆದಾರರಿಗೆ ನೀಡಿ ತ್ವರಿತವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆAದು ಭೋಸರಾಜು ತಾಕೀತು ಮಾಡಿದರು. ಟೆಂಡರ್ ಪ್ರಕ್ರಿಯೆಗಳು ವಿಳಂಬವಾಗಬಾರದು. ರಸ್ತೆ ಕೆಲಸಗಳನ್ನು ಆದ್ಯತೆ ಮೇರೆ ಮಾಡಿ ಸಾರ್ವಜನಿಕರಿಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕೆಂದು ಸೂಚಿಸಿದರು.

ಹೆದ್ದಾರಿ ಬದಿ ತಡೆಗೋಡೆ

ರಾಷ್ಟಿçÃಯ ಹೆದ್ದಾರಿ ನಡುವಿನ ಬರೆ ಜರಿತ ಜಾಗಗಳಲ್ಲಿ ತಡೆಗೋಡೆ ನಿರ್ಮಾಣ ಕೆಲಸವನ್ನು ಶೀಘ್ರ ಆರಂಭಿಸುವAತಾಗಬೇಕೆAದು ಸಚಿವರು ನಿರ್ದೇಶಿಸಿದರು. ಅದೇ ರೀತಿ ಕುಶಾಲನಗರದ ಸೇತುವೆ ಸೌಂದರೀಕರಣಕ್ಕೂ ಕ್ರಿಯಾಯೋಜನೆ ರೂಪಿಸಬೇಕು ಎಂದರು. ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ)

ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಗಿರೀಶ್ ಮಾತನಾಡಿ, ಹೆದ್ದಾರಿ ಬದಿಗಳಲ್ಲಿ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಆಗಸ್ಟ್ನಿಂದ ಕೆಲಸ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ೮ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. ಲಾರ್ವ ಸಮೀಕ್ಷೆ ಕಾರ್ಯವೂ ನಡೆಸಲಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ಹೃದಯಾಘಾತವನ್ನು ಅಧಿಸೂಚಿತ ಕಾಯಿಲೆಯನ್ನಾಗಿ ಪರಿಗಣಿಸುವ ನಿಟ್ಟಿನಲ್ಲಿ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ಮಾಹಿತಿ ನೀಡಿದರು.

ಅಗತ್ಯ ರಸಗೊಬ್ಬರ, ಕಾಂಪ್ಲೆಕ್ಸ್, ಡಿಎಪಿಗಳನ್ನು ದಾಸ್ತಾನಿಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ಒದಗಿಸಿದರು.

ಚೆಸ್ಕಾಂ ಅಧಿಕಾರಿ ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದ ೨೩೭೨ ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಈ ಪೈಕಿ ೨೩೬೪ ಕಂಬಗಳನ್ನು ಬದಲಾವಣೆ ಮಾಡಲಾಗಿದೆ. ‘ಕವರ್ ಕಂಡಕ್ಟರ್’ ಬಳಸಿ ವಿದ್ಯುತ್ ಜಾಲ ಬಲವರ್ಧನೆ ಮಾಡಿರುವ ಹಿನ್ನೆಲೆ ವಿದ್ಯುತ್ ಅಡಚಣೆ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.

ಮೂರ್ನಾಡಿನಲ್ಲಿ ವಿದ್ಯುತ್ ಉಪಕೇಂದ್ರ ಕೆಲಸ ನಡೆಯುತ್ತಿದೆ. ಮಾದಾಪುರದಲ್ಲಿ ಪೂರ್ಣಗೊಂಡಿದ್ದು, ಮರಗೋಡಿನಲ್ಲಿ ಜಾಗದ ವಿಷಯವಾಗಿ ಪ್ರಕ್ರಿಯೆಗಳು ಜಿಲ್ಲಾಧಿಕಾರಿ ಮಟ್ಟದಲ್ಲಿ ನಡೆಯುತ್ತಿದೆ ಎಂದರು.

ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ

ಮಳೆಗಾಲ ಪರಿಸ್ಥಿತಿ ಎದುರಿಸಲು ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದೆ. ಸಂಭವನೀಯ ಅಪಾಯಗಳನ್ನು ತಪ್ಪಿಸುವ ಕೆಲಸವಾಗಬೇಕು. ಜಿಲ್ಲಾಧಿಕಾರಿ ಬಳಿ ರೂ. ೪೦ ಕೋಟಿ ಹಣ ಲಭ್ಯವಿದೆ. ಸರಕಾರವೂ ಮಳೆಹಾನಿ ಸಂಬAಧ ಕೆಲಸಕ್ಕೆ ವಿಶೇಷ ಅನುದಾನವನ್ನು ನೀಡುತ್ತದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಆಗಸ್ಟ್ ತಿಂಗಳು ಮುಗಿಯುವ ತನಕ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಉಸ್ತುವಾರಿ ಸಚಿವ ಭೋಸರಾಜು ಅವರು ಸಲಹೆ ನೀಡಿದರು.

ಶಕ್ತಿ ಯೋಜನೆ - ೧.೨೦ ಕೋಟಿ ಮಹಿಳೆಯರು ಪ್ರಯಾಣ

ಶಕ್ತಿ ಯೋಜನೆ ಜಾರಿಯಾಗಿ ೨ ವರ್ಷ ಪೂರೈಸಿದ್ದು, ರಾಜ್ಯದಲ್ಲಿ ಕೋಟ್ಯಂತರ ಮಹಿಳೆಯರು ಪ್ರಯಾಣ ಮಾಡಿದ್ದು, ಕೊಡಗಿನಲ್ಲಿ ೧.೨೦ ಕೋಟಿ ಮಂದಿ ಪ್ರಯಾಣ ಮಾಡಿದ್ದಾರೆ ಇದರಿಂದ ನಿಗಮಕ್ಕೆ ೫೦೦ ಕೋಟಿಗೂ ಹೆಚ್ಚು ಆದಾಯ ಬಂದಿದೆ ಎಂದು ಭೋಸರಾಜು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಲ್ಲಿಯೇ ಕೊಡಗಿನಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿದ್ದರೂ ಇಷ್ಟೊಂದು ಪ್ರಮಾಣದಲ್ಲಿ ಸೇವೆ ದೊರಕಿರುವುದು ಗಮನಾರ್ಹ ಸಂಗತಿ ಎಂದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್ ಹಾಜರಿದ್ದರು.