ಗೋಣಿಕೊಪ್ಪಲು, ಜು. ೧೨: ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯನಿರ್ವಹಣೆ ಅಷ್ಟಾಗಿ ಸಮಧಾನ ತರುತ್ತಿಲ್ಲ. ಕ್ಷೇತ್ರದಲ್ಲಿ ಆನೆ ಮಾನವ ಸಂಘರ್ಷ, ಹುಲಿಯ ಹಾವಳಿ ಅಧಿಕಗೊಳ್ಳುತ್ತಿದ್ದರೂ ಅಧಿಕಾರಿಗಳ ನಿಧಾನಗತಿಯ ಕಾರ್ಯ ಸರಿಯಲ್ಲ ನಿಮಗೆ ಯಾವ ರೀತಿಯ ಅನುಮತಿ ಬೇಕಾಗಿದೆ ಅದನ್ನು ಕೊಡಿಸಲು ತಯಾರಿದ್ದೇನೆ. ಆದರೆ ನಿಮ್ಮ ಕಾರ್ಯ ವೈಖರಿ ಮತ್ತಷ್ಟು ಚುರುಕುಗೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ವೀರಾಜಪೇಟೆಯ ತಾಲೂಕು ಮಿನಿ ವಿಧಾನಸೌಧ ಸಭಾಂಗಣದಲ್ಲಿ ಕೊಡಗು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ತುರ್ತು ಸಭೆ ನಡೆಸಿದ ಶಾಸಕ ಪೊನ್ನಣ್ಣ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು. ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಭಾಗದಲ್ಲಿ ಹುಲಿಗಳ ಹಾವಳಿಯಿಂದ ರೈತರ ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವ ಮೂಲಕ ಅವುಗಳನ್ನು ಪುನರ್‌ವಸತಿ ಕೇಂದ್ರಕ್ಕೆ ಸಾಗಿಸುವ ಸಲುವಾಗಿ ೪ ಹುಲಿಗಳ ಸೆರೆಗೆ ಅನುಮತಿ ನೀಡಿ ತಿಂಗಳುಗಳೇ ಕಳೆದಿವೆ. ಆದರೆ ಇಲಾಖಾಧಿಕಾರಿಗಳು ಹುಲಿಯ ಸೆರೆಗೆ ಮುಂದಾಗದೆ ಇರುವ ಬಗ್ಗೆ ತಮ್ಮ ಅಸಮಾಧಾನವನ್ನು ಹೊರಹಾಕಿದರು. ಅನುಮತಿ ಲಭ್ಯವಿದ್ದರೂ ಕಾರ್ಯಾಚರಣೆಗೆ ವಿಳಂಬವೇಕೆ.? ಎಂದು ಪ್ರಶ್ನಿಸಿದರು. ಮುಂದೆ ಈ ರೀತಿ ಆಗಬಾರದು ಹುಲಿಗಳಿಂದ ತೊಂದರೆ ಎದುರಾದಲ್ಲಿ ಅವುಗಳನ್ನು ಸೆರೆ ಹಿಡಿಯುವಲ್ಲಿ ತಕ್ಷಣ ಕಾರ್ಯಾಚರಣೆ ಆರಂಭವಾಗಬೇಕು ಎಂದು ಸೂಚಿಸಿದರು. ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮುಂದೆ ತ್ವರಿತ ಗತಿಯಲ್ಲಿ ಕೆಲಸ ನಿರ್ವಹಣೆ ಮಾಡುವುದಾಗಿ ಹೇಳಿದರು.

ಕಾಡಾನೆಯ ಉಪಟಳದಿಂದಾಗಿ ಕ್ಷೇತ್ರದ ಹಲವೆಡೆ ರೈತರ, ಬೆಳೆಗಾರರ ತೋಟಗಳು ಹಾಳಾಗುತ್ತಿವೆ. ಅಲ್ಲದೆ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಇದರಿಂದ ಮನಸ್ಸಿಗೆ ನೋವುಂಟಾಗಿದೆ.

ಮುಂದೆ ಇಂತಹ ದುರ್ಘಟನೆಗಳು ನಡೆಯದಂತೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೆಲವು ಭಾಗದಲ್ಲಿ ಇಲಾಖೆಗೆ ವಾಹನದ ಕೊರತೆ ಸಿಬ್ಬಂದಿಗಳ ಕೊರತೆ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತೇನೆ. ಅಲ್ಲಿಯ ತನಕ ಲಭ್ಯವಿರುವ ಸೌಕರ್ಯಗಳನ್ನು ಬಳಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕು. ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಬಹುದು ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು. ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪರಸ್ಪರ ಹೊಂದಾಣಿಕೆಯಿAದ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳು ಎದುರಾದಾಗ ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಗಳು ಸಕಾಲದಲ್ಲಿ ಸದ್ಬಳಕೆ ಆಗಬೇಕು. ನಾಗರಿಕರಿಗೆ ತೊಂದರೆ ಎದುರಾದಲ್ಲಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಇದರಿಂದ ಜನರ ಸಮಸ್ಯೆಗೆ ಒಂದಷ್ಟು ಪರಿಹಾರ ಲಭಿಸಲಿದೆ. ಈ ನಿಟ್ಟಿನಲ್ಲಿ ಮುಂದೆ ಹಿರಿಯ ಅಧಿಕಾರಿಗಳು ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದರು.

ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣ ಅವರು ಅಧಿಕಾರಕ್ಕೆ ಬಂದ ನಂತರ ಆನೆ ಮಾನವ ಸಂಘರ್ಷದ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಅರಣ್ಯ ಮಂತ್ರಿಗಳಿಗೆ ಆಗಿಂದ್ದಾಗ್ಗೆ ವಿಷಯದ ಬಗ್ಗೆ ಗಮನ ಸೆಳೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ.

೨೧ ಕೋಟಿ ಅನುದಾನವನ್ನು ತರುವ ಮೂಲಕ ಅಗತ್ಯವಿರುವ ಕಡೆಗಳಲ್ಲಿ ಕೆಲಸ ನಿರ್ವಹಿಸಲು,ಬ್ಯಾರಿಕೇಡ್ ಅಳವಡಿಸಲು, ಕಂದಕ ನಿರ್ಮಿಸಲು ಸೂಚನೆ ನೀಡಿದ್ದರೂ ತ್ವರಿತಗತಿಯಲ್ಲಿ ಕೆಲಸಗಳು ನಡೆಯುತ್ತಿಲ್ಲ. ಇದರಿಂದ ಕಾಡಾನೆಗಳ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿನ ಕೆಲವು ಅಧಿಕಾರಿಗಳ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಘಟನೆಗಳು ನಡೆದ ತಕ್ಷಣ ಅಲ್ಲಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಪರಿಹಾರ ನೀಡಿದಲ್ಲಿ ಮಾತ್ರ ಇಲಾಖೆಯ ಮೇಲೆ ಇರುವ ಗೌರವ ಉಳಿಯುತ್ತದೆ. ಇಲ್ಲದಿದ್ದಲ್ಲಿ ಇಲಾಖೆಯ ಮೇಲೆ ಅಸಮಾಧಾನ ಮುಂದುವರೆಯುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್‌ಪ್ರಕಾಶ್ ಮೀನಾ, ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಅಭಿಷೇಕ್, ನಾಗರಹೊಳೆ ವನ್ಯಜೀವಿ ವಿಭಾಗದ ನಿರ್ದೇಶಕರಾದ ಸೀಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ.ಎ.ನೆಹರು, ಜಗನ್ನಾಥ್,ತಿತಿಮತಿ ಮತ್ತು ವೀರಾಜಪೇಟೆ ಉಪ ವಿಭಾಗದ ಎಸಿಎಫ್‌ಗಳಾದ ಗೋಪಾಲ್, ವಿ.ಪಿ.ಕಾರ್ಯಪ್ಪ,ಮೋಹಿನ್ ಪಾಷ, ಲಕ್ಷಿö್ಮಕಾಂತ್, ಎ.ಎ. ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಗಂಗಾಧರ್, ಶಂಕರ್,ಅರವಿAದ್, ಸಂತೋಷ್,ಶಿವರಾಮ್, ಡಿನ್ಸಿ ದೇಚಮ್ಮ, ರತನ್ ಕುಮಾರ್, ದೇವರಾಜ್, ಸೇರಿದಂತೆ ಇನ್ನಿತರ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್