ಮಡಿಕೇರಿ, ಜು. ೧೨: ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದ್ದು, ಸಿಬ್ಬಂದಿಗಳ ಕೊರತೆಯ ನಡುವೆಯೇ ಇರುವ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದೇ ದರ್ಪ ತೋರುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ, ಸೋಮವಾರಪೇಟೆ ಹಾಗೂ ಮಡಿಕೇರಿ ಟೂರಿಸ್ಟ್ ಟ್ಯಾಕ್ಸಿ ಚಾಲಕರ ಸಂಘ, ಸೋಮವಾರಪೇಟೆ ವಾಹನ ಚಾಲಕರು ಮತ್ತು ಕಾರ್ಮಿಕರ ಸಂಘ ಪದಾಧಿಕಾರಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ಆರ್ಟಿಓ ಕಚೇರಿಗೆ ತೆರಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆರ್ಟಿಓ ಕಚೇರಿಯಲ್ಲಿ ಕೆಲವೇ ಮಂದಿ ಸಿಬ್ಬಂದಿಗಳು ಇತರ ವಿಭಾಗದ ಕೆಲಸಗಳನ್ನೂ ವಹಿಸಿಕೊಂಡಿದ್ದಾರೆ. ನಿಗದಿತ ಸಮಯಕ್ಕೆ ಸಾರ್ವಜನಿಕರ ದಾಖಲಾತಿಗಳನ್ನು ಒದಗಿಸದೇ ವಿಳಂಬ ಮಾಡುತ್ತಿದ್ದಾರೆ. ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಯಾವುದೇ ಕುರ್ಚಿಗಳನ್ನು ಕೂಡ ಅಳವಡಿಸಿಲ್ಲ, ಇಲ್ಲಿರುವ ಸಾರ್ವಜನಿಕರ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಅದಕ್ಕೆ ಬೀಗ ಜಡಿಯಲಾಗಿದೆ. ಹಲವು ಮಂದಿ ಸಿಬ್ಬಂದಿಗಳು ಹತ್ತಾರು ವರ್ಷಗಳಿಂದ ಮಡಿಕೇರಿ ಆರ್ಟಿಓ ಕಚೇರಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇವರನ್ನು ತಕ್ಷಣವೇ ಇಲ್ಲಿಂದ ವರ್ಗಾವಣೆ ಮಾಡುವಂತೆ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಸುರೇಶ್ ಚಕ್ರವರ್ತಿ ಆಗ್ರಹಿಸಿದರು. ಒಂದು ವಾರದ ಒಳಗಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸೋಮವಾರಪೇಟೆ ಟೂರಿಸ್ಟ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ವಸಂತ್ ಮಾತನಾಡಿ, ಸರ್ವರ್ ಸಮಸ್ಯೆಯನ್ನು ಮುಂದಿಟ್ಟು ಟ್ಯಾಕ್ಸಿ ವಾಹನಗಳ ಎಫ್.ಸಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಇದರಿಂದ ಟೂರಿಸ್ಟ್ ಟ್ಯಾಕ್ಸಿಗಳನ್ನು ನಂಬಿ ಬದುಕುತ್ತಿರುವ ಬಡ ಕುಟುಂಬಗಳು ಹೊತ್ತಿನ ಕೂಳಿಗೂ ಪರಿತಪಿಸುವಂತಾಗಿದೆ. ಕೂಡಲೇ ಟ್ಯಾಕ್ಸಿಗಳ ದಾಖಲಾತಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಾರಿಗೆ ಕಚೇರಿ ವಿಭಾಗದ ಮೇಲ್ವಿಚಾರಕರು, ಗುರುವಾರ ದಿನ ಜಿಲ್ಲೆಗೆ ನೂತನ ಸಾರಿಗೆ ಅಧಿಕಾರಿಗಳು ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಾರೆ. ನಿಮ್ಮ ಬೇಡಿಗೆ ಮತ್ತು ಮನವಿಯನ್ನು ಆರ್ಟಿಓ ಅಧಿಕಾರಿಗೆ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಆರ್ಟಿಓ ಅಧಿಕಾರಿಗಳು ಹಾಗೂ ವಿಭಾಗ ಮೇಲ್ವಿಚಾರಕರು ಭರವಸೆ ನೀಡಿದರು.
ಈ ಸಂದರ್ಭ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ದೀಪಕ್, ಸೋಮವಾರಪೇಟೆ ವಾಹನ ಮಾಲೀಕರು ಮತ್ತು ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಕೃಷ್ಣ, ಮಡಿಕೇರಿ ಟೂರಿಸ್ಟ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಸಂತು ಕಾರ್ಯಪ್ಪ, ಟ್ಯಾಕ್ಸಿ ಅಸೋಸಿಯೇಷನ್ ಪ್ರಮುಖರು ಹಾಜರಿದ್ದರು.