ಐಗೂರು, ಜು. ೧೨: ಕೊಡಗಿನಲ್ಲಿ ಬಿಜೆಪಿ ಸಂಘಟನೆ ಉತ್ತಮವಾಗಿದ್ದ ಕಾರಣ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಲು ಸಹಕಾರಿ ಯಾಯಿತು ಎಂದು ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಚಾಮರಾಜ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಐಗೂರಿನ ಕೃಷಿ ಪತ್ತಿನ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಐಗೂರು, ಕಿರಗಂದೂರು ಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಅಮೃತ ಯೋಜನೆ, ಟವರ್‌ಗಳ ಸಮಸ್ಯೆ ಮತ್ತು ಜೆಜೆಎಂ ಸಮಸ್ಯೆಗೆ ಆದಷ್ಟು ಬೇಗ ಶಾಶ್ವತ ಪರಿಹಾರ ದೊರಕಲಿದೆ ಎಂದರು.

ಕಾಳುಮೆಣಸಿಗೆ ಜಿಎಸ್‌ಟಿ ವಿಧಿಸಲಾಗಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್ ಮುಖಾಂತರ ತೆರಿಗೆಯನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಉತ್ತಮ ಆಡಳಿತ ಕಾಣಿಸುತ್ತಿಲ್ಲ. ಪ್ರಗತಿ ಕಂಡ ರಾಜ್ಯ ಎಂದು ಗುರುತಿಸಿ ಕೊಂಡರೂ ಇತ್ತೀಚಿನ ಬೆಳವಣಿಗೆ ಯಲ್ಲಿ ಶೂನ್ಯ ಸಾಧನೆಯೆಡೆಗೆ ರಾಜ್ಯ ಸಾಗುತ್ತಿದೆ ಎಂದರು.

ಬಿ.ಜೆ.ಪಿ. ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪಕ್ಷವನ್ನು ಸದೃಢಗೊಳಿಸಿ ಎರಡು ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಬೇಕು ಎಂದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಐಗೂರಿನ ನೂತನ ಕಬ್ಬಿಣ ಸೇತುವೆಗೆ ಭೂಮಿಪೂಜೆ ಆಗಿದ್ದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಮಂಜೂರು ಆಗದ ಕೆಲಸಗಳಿಗೆ ಎನ್‌ಡಿಆರ್‌ಎಫ್ ನಲ್ಲಿ ಬಂದ ಹಣದಿಂದ ಭೂಮಿಪೂಜೆ ಮಾಡುತ್ತಿದ್ದಾರೆ.

ಕಾಫಿ ಬೆಳೆಗಾರರ ೫೫,೦೦೦ ಕುಟುಂಬಗಳಿಗೆ ನಮ್ಮ ಅವಧಿಯಲ್ಲಿ ಹಣ ನೀಡಿದ್ದೇವೆ. ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಸೈನಿಕ ಶಾಲೆ, ಇಂಜಿನಿಯರ್ ಕಾಲೇಜು ಸ್ಥಾಪನೆ ಮಾಡಿದ್ದೇವೆ. ಕೊರೊನಾ ಸಮಯದಲ್ಲಿ ೪೭ ಸಾವಿರ ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾತನಾಡಿ, ಆನೆಗಳ ತಡೆಗೆ ಟ್ರೆಂಚ್ ಮತ್ತು ಬ್ಯಾರಿಕೇಡ್ ನಿರ್ಮಿಸಲು ರೂ. ೧೫೦ ಕೋಟಿ ಖರ್ಚಾಗಿದ್ದು, ಈಗಿನ ಸರ್ಕಾರ ಆನೆಗಳ ವಿಷಯದಲ್ಲಿ ಏನೂ ಸಾಧಿಸಿಲ್ಲ ಎಂದರು.

ಶಕ್ತಿ ಕೇಂದ್ರದ ಪ್ರಮುಖರಾದ ಪ್ರಮೋದ್, ಸುಧೀರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್, ಮಾಜಿ ಜಿ.ಪಂ. ಅಧ್ಯಕ್ಷ ವಿ.ಎಂ. ವಿಜಯ, ನಿಕಟಪೂರ್ವ ಅಧ್ಯಕ್ಷ ಭಾರತೀಶ್, ಗ್ರಾ.ಪಂ. ಅಧ್ಯಕ್ಷ ವಿನೋದ್, ಕೃಷಿ ಪತ್ತಿನ ಅಧ್ಯಕ್ಷ ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಅಜೀಸ್ ಕುಮಾರ್, ಪ್ರಮುಖರಾದ ಎಂ.ಎ. ಪ್ರಭಾಕರ, ಪ್ರಕಾಶ್ ಬೆಳ್ಳಿಯಪ್ಪ, ಹರೀಶ್ ಕುಮಾರ್, ವಿಜಯಕುಮಾರ್ ಉಪಸ್ಥಿತರಿದ್ದರು.