ಇಸ್ರೇಲ್ ದಾಳಿಗೆ ೨೯ ಮಂದಿ ಸಾವು
ಪ್ಯಾಲೆಸ್ಟೀನ್, ಜು. ೧೩: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ೬ ಮಕ್ಕಳು ಸೇರಿದಂತೆ ಕನಿಷ್ಟ ೨೯ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆ ಭಾನುವಾರ ತಿಳಿಸಿದೆ. ಗಾಜಾ ನಗರದಲ್ಲಿ ಶನಿವಾರ ರಾತ್ರಿಯಿಡೀ ಮತ್ತು ಭಾನುವಾರ ಮುಂಜಾನೆ ಹಲವು ದಾಳಿಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ೨೯ ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ನಾಗರಿಕ ರಕ್ಷಣಾ ವಕ್ತಾರ ಮಹ್ಮದ್ ಬಸ್ಸಲ್ ತಿಳಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಅತ್ಯಾಚಾರ ಪ್ರಕರಣ - ಎಸ್‌ಐಟಿ ರಚನೆ
ಕೋಲ್ಕತ್ತ, ಜು. ೧೩: ಕೋಲ್ಕತ್ತದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಪೊಲೀಸರು ೯ ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತಂಡದ ನೇತೃತ್ವವನ್ನು ನೈಋತ್ಯ ವಿಭಾಗದ ಸಹಾಯಕ ಆಯುಕ್ತರು ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಐಐಎಂ ಕಾಲೇಜಿನ ಹುಡುಗರ ಹಾಸ್ಟೆಲ್‌ನ ಒಳಗೆ ಶುಕ್ರವಾರ ಕೃತ್ಯ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಯು ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕೌನ್ಸಿಲಿಂಗ್ ನೆಪದಲ್ಲಿ ವಿದ್ಯಾರ್ಥಿನಿಯನ್ನು ಹಾಸ್ಟೆಲ್‌ಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ನೀಡಿದ ಪಾನೀಯ ಕುಡಿದ ಬಳಿಕ ಆಕೆ ಅಸ್ವಸ್ಥಗೊಂಡಿದ್ದರು. ಪ್ರಜ್ಞೆ ಬಂದಾಗ ತನ್ನ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಆಕೆಗೆ ಅರಿವಾಗಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಕನ ಬರ್ಬರ ಕೊಲೆ
ಬೆಳಗಾವಿ, ಜು. ೧೩: ಉತ್ತರ ಕರ್ನಾಟಕದ ಗಾಯಕ ಮಾರುತಿ ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತçಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬೂದಿಹಾಳದಲ್ಲಿ ನಡೆದಿದೆ. ೨೨ ವರ್ಷದ ಮಾರುತಿ ಅಡಿವೆಪ್ಪ ಲಟ್ಟೇ ಈರಪ್ಪ ಎಂಬಾತನಿAದ ೫೦ ಸಾವಿರ ರೂಪಾಯಿ ಸಾಲ ಪಡೆದಿದ್ದನು. ೪೫ ಸಾವಿರ ವಾಪಸ್ ಕೊಟ್ಟಿದ್ದು, ೫ ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದನು. ಈ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಈರಪ್ಪ ಅಕ್ಕಿವಾಟೆ ಗುಂಪು ಕಟ್ಟಿಕೊಂಡು ಮಾರುತಿ ಮೇಲೆ ದಾಳಿ ನಡೆಸಿದ್ದಾರೆ. ಕಳೆದ ರಾತ್ರಿ ಬೈಕ್‌ನಲ್ಲಿ ಮಾರುತಿ ಬರುವಾಗ ಈರಪ್ಪ ತಂಡ ಅಡ್ಡಗಟ್ಟಿದ್ದು ಮೊದಲಿಗೆ ಮಾರಕಾಸ್ತçದಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ನೆಲದ ಮೇಲೆ ಬಿದ್ದಿದ್ದ ಮಾರುತಿ ಮೇಲೆ ಕಾರು ಹತ್ತಿಸಿದ್ದು ಮಾರುತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾರುತಿ ಮೇಲೆ ಕಾರನ್ನು ಹತ್ತಿಸುವಾಗ ಕಾರ್ ಪಲ್ಟಿಯಾಗಿ ಆರೋಪಿಗಳು ಗಾಯಗೊಂಡಿದ್ದು ಈರಪ್ಪನಿಗೆ ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ರಾಯಬಾಗ ಪೊಲೀಸ್ ಠಾಣೆಯಲ್ಲಿ ೧೧ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು ಸಿದ್ದರಾಮ ಒಡೆಯರ್, ಆಕಾಶ್ ಪೂಜಾರಿಯನ್ನು ಬಂಧಿಸಿದ್ದಾರೆ.
ಮೊದಲ ಬಾರಿ ಸಾರ್ವಜನಿಕ ಪ್ರತಿಭಟನೆಗಿಳಿದ ವಿಜಯ್
ಚೆನ್ನೆöÊ, ಜು. ೧೩: ರಾಜಕೀಯಕ್ಕೆ ಕಾಲಿಟ್ಟ ನಂತರ ಮೊದಲ ಬಾರಿಗೆ ಸಾರ್ವಜನಿಕ ಪ್ರತಿಭಟನೆಗೆ ಧುಮ್ಮಿಕ್ಕಿದ ಟಿವಿಕೆ ಸಂಸ್ಥಾಪಕ ಮತ್ತು ನಟ ವಿಜಯ್ ಭಾನುವಾರ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಾಲ್ಕು ವರ್ಷಗಳ ಆಡಳಿತದಲ್ಲಿ ಸಂಭವಿಸಿರುವ ಲಾಕಪ್ ಡೆತ್ ಆರೋಪಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಶಿವಗಂಗಾ ಜಿಲ್ಲೆಯ ಮಡಪ್ಪುರಂನಲ್ಲಿ ದೇವಾಲಯದ ಭದ್ರತಾ ಸಿಬ್ಬಂದಿ ಅಜಿತ್‌ಕುಮಾರ್ ಸಾವಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದ್ದ ಸಿಎಂ ನಡೆಯನ್ನು ಟೀಕಿಸಿದ ಟಿವಿಕೆ ನಾಯಕ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಂದೆ ಸ್ಟಾಲಿನ್ ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿದರು. ಅಜಿತ್‌ಕುಮಾರ್ ಕುಟುಂಬಕ್ಕೆ ‘ಕ್ಷಮಿಸಿ’ ಎಂದು ಕೇಳಿದ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡ ವಿಜಯ್, ನೀವು ಅಜಿತ್‌ಕುಮಾರ್ ಕುಟುಂಬಕ್ಕೆ ಸಾರಿ ಕೇಳಿದ್ದೀರಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ನಿಮ್ಮ ನಾಲ್ಕು ವರ್ಷಗಳ ಆಡಳಿತದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ೨೪ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ಕುಟುಂಬಗಳಿಗೆ ‘ಕ್ಷಮಿಸಿ’ ಎಂದು ಹೇಳಿದ್ದೀರಾ? ಅವರಿಗೆ ಪರಿಹಾರ ನೀಡಿದ್ದೀರಾ? ಎಂದು ಟೀಕಾ ಪ್ರಹಾರ ನಡೆಸಿದರು.
ನದಿಯಲ್ಲಿ ಮುಳುಗಿ ಮೂವರು ಯುವಕರ ಸಾವು
ರಾಯಚೂರು, ಜು. ೧೩: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರನ್ನು ಹಾಸನ ಮೂಲದ ಅಜಿತ್ (೨೦), ಸಚಿನ್ (೨೦) ಹಾಗೂ ಪ್ರಮೋದ (೧೯) ಎಂದು ಗುರುತಿಸಲಾಗಿದೆ. ಹಾಸನದ ಐವರು ಯುವಕರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ರಾಯರ ಮಠಕ್ಕೆ ಬಂದಿದ್ದರು. ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ರಾಯರ ದರ್ಶನ ಪಡೆದಿದ್ದರು. ಸಂಜೆ ಊರಿಗೆ ಮರಳುವ ಮೊದಲು ನದಿಯಲ್ಲಿ ಮತ್ತೊಮ್ಮೆ ಸ್ನಾನ ಮಾಡಲು ನಿರ್ಧರಿಸಿದ್ದರು. ಐವರಲ್ಲಿ ನೀರಿಗೆ ಇಳಿದ ಮೂವರು ನೀರು ಪಾಲಾಗಿದ್ದರು. ಮುಳುಗು ತಜ್ಞರು ಹಾಗೂ ಪೊಲೀಸರು ನದಿಯಲ್ಲಿ ಶೋಧ ನಡೆಸಿದರೂ ಯುವಕರ ಪತ್ತೆಯಾಗಿರಲಿಲ್ಲ. ಭಾನುವಾರ ಆಂಧ್ರಪ್ರದೇಶದ ಎಸ್‌ಡಿಆರ್‌ಎಫ್ ತಂಡವು ಯುವಕರು ಮುಳುಗಿದ ಜಾಗದಲ್ಲೇ ಶೋಧ ನಡೆಸಿದಾಗ ಯುವಕರ ಶವಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಸಂಬAಧಿಗಳಿಗೆ ಹಸ್ತಾಂತರಿಸಲಾಯಿತು.
ಹೆAಡತಿ ಜೊತೆ ಜಗಳ - ಮಗನ ಕೊಲೆ
ಪಟ್ನ, ಜು. ೧೩: ಆರು ವರ್ಷದ ಮಗನನ್ನು ನೆಲಕ್ಕೆ ಗುದ್ದಿ ತಂದೆಯೇ ಕೊಲೆ ಮಾಡಿರುವ ಘಟನೆ ಪಟ್ನದ ರೈಲ್ವೇ ನಿಲ್ದಾಣದ ಬಳಿಯ ಹೊಟೇಲ್‌ನಲ್ಲಿ ಭಾನುವಾರ ನಡೆದಿದೆ. ಪ್ರಭಾಕರ್ ಮಹೋತೋ ಎನ್ನುವ ವ್ಯಕ್ತಿ ತನ್ನ ಮಗ ಸನ್ನಿ(೬)ಯನ್ನು ಕೊಲೆ ಮಾಡಿ, ತಲೆಮರೆಸಿಕೊಂಡಿದ್ದಾನೆ. ಭಾನುವಾರ ಮುಂಜಾನೆ ಹೊಟೇಲ್‌ನ ಕೊಠಡಿಯಲ್ಲಿ ತಂದೆ ಮಗನಿಗೆ ಥÀಳಿಸುತ್ತಿರುವ ಮಾಹಿತಿ ಮೇರೆಗೆ ಆಗಮಿಸಿದ ಪೊಲೀಸರು, ತಕ್ಷಣವೇ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶನಿವಾರ ರಾತ್ರಿ ಹೊಟೇಲ್‌ನ ಕೊಠಡಿಯಲ್ಲಿ ಗಂಡ ಹಾಗೂ ಹೆಂಡತಿಯ ನಡುವೆ ಜಗಳವಾಗಿದ್ದು, ಬಳಿಕ ಮಗುವಿನ ಮೇಲೆ ತಂದೆ ಹಲ್ಲೆ ಮಾಡಿದ್ದಾನೆ. ಘಟನೆಯ ನಂತರ ಆರೋಪಿ ನಾಪತ್ತೆಯಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಟ್ನಕ್ಕೆ ಭೇಟಿ ನೀಡಿದ್ದ ದಂಪತಿ, ಮಗುವಿನ ಜೊತೆಗೆ ಹೊಟೇಲ್ ಕೊಠಡಿಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಘಟನೆ ಜರುಗಿದೆ ಎಂದು ತಿಳಿಸಿದ್ದಾರೆ.
ಎಂಎಲ್‌ಸಿ ಕಚೇರಿ ಮೇಲೆ ದಾಳಿ - ಗಾಳಿಯಲ್ಲಿ ಗುಂಡು
ಹೈದರಾಬಾದ್, ಜು. ೧೩: ಕಚೇರಿಗೆ ಪ್ರವೇಶಿಸಿದ ತೆಲಂಗಾಣ ಜಾಗೃತಿ ಸದಸ್ಯರ ಗುಂಪನ್ನು ಚದುರಿಸಲು ಎಂಎಲ್‌ಸಿ ತಿನ್ಮಾರ್ ಮಲ್ಲಣ್ಣ ಅವರ ಗನ್‌ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಮಲ್ಲಣ್ಣ ಅವರು ಇತ್ತೀಚೆಗೆ ಬಿಆರ್‌ಎಸ್ ನಾಯಕಿ ಕವಿತಾ ವಿರುದ್ಧ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ, ತೆಲಂಗಾಣ ಜಾಗೃತಿ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು, ಮೆಡಿಪಲ್ಲಿಯಲ್ಲಿರುವ ಮಲ್ಲಣ್ಣ ಅವರ ಕಚೇರಿಯ ಮೇಲೆ ದಾಳಿ ಮಾಡಿದ್ದಾರೆಂದು ಆರೋಪಿಸಲಾಗಿದೆ. ಘಟನೆ ನಡೆದಾಗ ಮಲ್ಲಣ್ಣ ಅವರು ಕಚೇರಿಯಲ್ಲಿ ಇದ್ದರು ಎನ್ನಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ಮಲ್ಲಣ್ಣ ಅವರ ಹೇಳಿಕೆಯಿಂದ ಆಕ್ರೋಶಗೊಂಡ ತೆಲಂಗಾಣ ಜಾಗೃತಿಯ ಸದಸ್ಯರ ಗುಂಪೊAದು ಅವರ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದೆ. ಅಲ್ಲದೇ ಅವರು ಕಚೇರಿಯಲ್ಲಿದ್ದ ಕೆಲವು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಗನ್‌ಮ್ಯಾನ್ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.