ಸೋಮವಾರಪೇಟೆ, ಜು. ೧೨: ಸಮೀಪದ ಕೋವರ್‌ಕೊಲ್ಲಿಯಲ್ಲಿರುವ ದಿ ಬ್ಲಾಸಂ ಕೂರ್ಗ್ ರೆಸಾರ್ಟ್ನಲ್ಲಿ ತಾಲೂಕು ಹೋಂಸ್ಟೇ ಅಂಡ್ ಟೂರಿಸಂ ಅಸೋಸಿಯೇಷನ್ ಸಭೆಯು ಅಧ್ಯಕ್ಷರಾದ ಸಿ.ಕೆ. ರೊಹಿತ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ತಾಲೂಕು ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರವಾಸೋದ್ಯಮದವರಿಗೆ ಅನುಕೂಲವಾಗುವಂತಹ ಪ್ರವಾಸೋದ್ಯಮ ಸ್ಥಳಗಳ ಮಾರ್ಗಸೂಚಿ ಫಲಕಗಳು ಅಳವಡಿಸುವುದು, ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಮತ್ತು ಸಂಘದ ವತಿಯಿಂದ ಕಾರೆಕೊಪ್ಪ ಜಂಕ್ಷನ್ ಬಳಿ ಬಸ್ ತಂಗುದಾಣವನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.

ಈ ಸಭೆಯಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿಯರಾದ ರಾಗಿಣಿ ಅವರು ಭಾಗವಹಿಸಿ ಮಾತನಾಡಿ, ಯೋಗದ ಮಹತ್ವದ ಬಗ್ಗೆ ವಿವರಿಸಿದರು. ಸೋಮವಾರಪೇಟೆ ಪಟ್ಟಣದ ಕ್ಲಬ್ ರಸ್ತೆಯಲ್ಲಿ ನೂತನವಾಗಿ ಆರ್ಟ್ ಆಫ್ ಲಿವಿಂಗ್ ಕೇಂದ್ರ ತೆರೆದಿರುವ ಬಗ್ಗೆ ಮಾಹಿತಿ ನೀಡಿದ ಅವರು, ಯೋಗ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ದಿ ಬ್ಲಾಸಂ ಕೂರ್ಗ್ ರೆಸಾರ್ಟ್ ಮಾಲೀಕರಾದ ಓಂ ಪ್ರಕಾಶ್ ಚೌದರಿ, ರೇಖಾ ಚೌದರಿ, ಹೋಂ ಸ್ಟೇ ಅಸೋಸಿಯೇಷನ್‌ನ ಉಪಾಧ್ಯಕ್ಷರಾದ ಯೋಗೇಶ್ ಪಟೇಲ್, ಕಾರ್ಯದರ್ಶಿ ಎಸ್.ಎಲ್. ಅಭಿನಂದ್ ಸೇರಿದಂತೆ ಇತರರು ಇದ್ದರು.