ಶನಿವಾರಸಂತೆ, ಜು. ೧೩: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನ್ನದಾತ ರೈತರು ಭತ್ತದ ಕೃಷಿಯನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಸಮುದಾಯ ಭವನದಲ್ಲಿ ಸೋಮವಾರಪೇಟೆ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಯಂತ್ರಶ್ರೀ ಯೋಜನೆಯಡಿ ಯಾಂತ್ರೀಕೃತ ಭತ್ತ ನಾಟಿಗೆ ಪೂರಕವಾದ ಸಸಿಮಡಿ ತಯಾರಿ ಮತ್ತು ಬಿತ್ತನೆ ಬೀಜೋಪಚಾರ ಮಾಡುವ ವಿಧಾನಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಗದ್ದೆಗಳಲ್ಲಿ ಭತ್ತ ಬೆಳೆಯುವುದು ಕಡಿಮೆ ಮಾಡುತ್ತಿದ್ದಾರೆ. ಇದು ಮುಂದುವರೆದರೆ ಮುಂದೊAದು ದಿನ ಭತ್ತದ ಬೆಳೆ ನಶಿಸಿ ಹೋಗಬಹುದು. ಈ ನಿಟ್ಟಿನಲ್ಲಿ ಭತ್ತದ ವ್ಯವಸಾಯವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಧರ್ಮಸ್ಥಳ ಸಂಸ್ಥೆಯು ಕೃಷಿಗೆ ಆದ್ಯತೆ ನೀಡುತ್ತಿದ್ದು ಕೃಷಿ ಇಲಾಖೆ ಜತೆಗೂಡಿ ಯಾಂತ್ರೀಕೃತ ಕೃಷಿ ವಿಧಾನಗಳ ಕುರಿತು ರೈತರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಸಂಸ್ಥೆಯ ಯಂತ್ರಶ್ರೀ ಕೇಂದ್ರದಲ್ಲಿ ನಾಟಿಯಂತ್ರ ಮತ್ತಿತರ ಕೃಷಿ ಯಂತ್ರಗಳು ಲಭ್ಯವಿದ್ದು ಇವುಗಳನ್ನು ಬಾಡಿಗೆ ರೂಪದಲ್ಲಿ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಮನವಿ ಮಾಡಿದರು.

ಕಾರ್ಯಾಗಾರದಲ್ಲಿ ಸೋಮವಾರಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಣ್ಣ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಆತ್ಮ ಯೋಜನೆ ಸಹಾಯಕ ತಾಂತ್ರಿಕಾಧಿಕಾರಿ ಬಾಂಧವ್ಯ ಬಿತ್ತನೆ ಬೀಜೋಪಚಾರ ವಿಧಾನದ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ನೀರುಗುಂದ ಗ್ರಾಮದ ಪ್ರಗತಿಪರ ಕೃಷಿಕ ಹೇಮಚಂದ್ರ ಮಾತನಾಡಿ, ಕೃಷಿಯ ಬಗ್ಗೆ ತಮ್ಮ ಅನುಭವ ಹಂಚಿಕೊAಡರು. ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಮಾಹಿತಿ ನೀಡಿದರು. ಕೊಡ್ಲಿಪೇಟೆ ವಲಯ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿಗಳಾದ ರಾಣಿ, ಶಾರದಾ, ಫಾತಿಮಾ, ಗ್ರಾಮದ ಪ್ರಮುಖರು ಹಾಜರಿದ್ದರು.