ಮಡಿಕೇರಿ, ಜು. ೧೩: ಮಳೆಯಿಂದ ಭೂಕುಸಿತ ಸಾಧ್ಯತೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ರಾತ್ರಿ ವೇಳೆಯಲ್ಲಿ ಮಡಿಕೇರಿಗೆ ಆಗಮಿಸಿ ಲಾರಿಗಳನ್ನು ಪೊಲೀಸರು, ಆರ್.ಟಿ.ಓ. ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ದಂಡ ವಿಧಿಸಿ ಕ್ರಮಕೈಗೊಂಡರು.

ಜುಲೈ ೬ ರಿಂದ ಆಗಸ್ಟ್ ೫ ರವರೆಗೆ ಭಾರಿ ವಾಹನಗಳಾದ ವಾಹನದ ನೋಂದಣಿ ತೂಕ ೧೮.೫೦೦ ಕೆ.ಜಿ. ಗಿಂತ ಹೆಚ್ಚಿನ ಸಾಗಾಣಿಕೆ ವಾಹನಗಳು, ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು/ ಆರ್ಟಿಕ್ಯೂಲೇಟೆಡ್ ವಾಹನಗಳ ಸಂಚಾರವನ್ನು ಜಿಲ್ಲೆಯಲ್ಲಿ ನಿಷೇಧಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದರು.

ಆದರೆ, ಆದೇಶ ಉಲ್ಲಂಘಿಸಿ ೧೨ ಲಾರಿಗಳು ವಿವಿಧೆಡೆಗಳಿಂದ ಮಡಿಕೇರಿ ಮೂಲಕ ಮಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಸಂಚರಿಸುತ್ತಿರುವ ಕುರಿತು ಸ್ಥಳೀಯ ಚಾಲಕರಿಗೆ ಮಾಹಿತಿ ತಿಳಿದು ಬಂದಿದ್ದು, ತಕ್ಷಣ ನಗರದ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ (ಸುದರ್ಶನ) ವಾಹನ ತಡೆದು ಪೊಲೀಸರು ಹಾಗೂ ಆರ್.ಟಿ.ಓ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಉಪನಿರೀಕ್ಷಕಿ ಅನ್ನಪೂರ್ಣ, ಸಂಚಾರಿ ಠಾಣಾಧಿಕಾರಿ ಶ್ರೀಧರ್, ಆರ್.ಟಿ.ಓ. ಅಧಿಕಾರಿ ಮೋಹನ್ ಕುಮಾರ್ ಹಾಗೂ ಪೊಲೀಸರು ಲಾರಿಗಳನ್ನು ವಶಪಡಿಸಿಕೊಂಡರು.

ಲಾರಿ ಚಾಲಕ-ಮಾಲೀಕರ ಅಸಮಾಧಾನ

ನಷ್ಟದ ನಡುವೆಯೂ ಜಿಲ್ಲಾಡಳಿತ ಆದೇಶವನ್ನು ಜಿಲ್ಲೆಯ ಲಾರಿ ಚಾಲಕ ಹಾಗೂ ಮಾಲೀಕರು ಪಾಲಿಸುತ್ತಿದ್ದಾರೆ. ಆದರೆ, ಗಡಿಭಾಗದಲ್ಲಿ ಚೆಕ್‌ಪೋಸ್ಟ್ಗಳಿದ್ದರೂ ಸಲೀಸಾಗಿ ಭಾರಿ ವಾಹನಗಳು ಸಂಚಾರ ಮಾಡುತ್ತಿರುವ ಬಗ್ಗೆ ಲಾರಿ ಚಾಲಕ ಹಾಗೂ ಮಾಲೀಕರು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕಾಗಮಿಸಿ ಉಪನಿರೀಕ್ಷಕಿ ಅನ್ನಪೂರ್ಣ ಅವರೊಂದಿಗೆ ಕೆಲಕಾಲ ಮಾತಿನ ಚಕಮಕಿಯೂ ನಡೆಯಿತು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ವಾಹನಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗಿದೆ ಎಂದು ಎಸ್.ಐ. ಅನ್ನಪೂರ್ಣ ‘ಶಕ್ತಿ’ಗೆ ತಿಳಿಸಿದ್ದಾರೆ.