ಚೆಯ್ಯಂಡಾಣೆ, ಜು. ೧೨: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಕೇರಿ, ನರಿಯಂದಡ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ಹಾಗೂ ಗೊಬ್ಬರವನ್ನು ನಾಶಪಡಿಸಿ ಅಪಾರ ನಷ್ಟ ಉಂಟು ಮಾಡಿದೆ.ಕೋಕೇರಿ ಗ್ರಾಮದ ಚೆರುವಾಳಂಡ ಕಿಶನ್ ಸೋಮಯ್ಯ ಅವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಅಲ್ಲಿ ಸಂಗ್ರಹಿಸಿಟ್ಟಿದ್ದ ೨೫ ಕ್ಕೂ ಅಧಿಕ ಗೊಬ್ಬರ ಚೀಲವನ್ನು ನಾಶ ಪಡಿಸಿದೆ ಅಡಿಕೆ, ಕಾಫಿ, ಬಾಳೆ ಮತ್ತಿತರ ಗಿಡಗಳನ್ನು ತುಳಿದು ನಾಶ ಪಡಿಸಿದೆ ಹಾಗೂ ನರಿಯಂದಡ ಗ್ರಾಮದ ತೋಟಂಬೈಲು ಅನಂತ್ ಕುಮಾರ್ ರವರ ಮನೆಯ ಸಮೀಪದಲ್ಲಿ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದ ಕಾಫಿ, ಅಡಿಕೆ, ಒಳ್ಳೆಮೆಣಸು, ಬಾಳೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟು ಮಾಡಿದೆ. ೪ಐದÀನೇ ಪುಟಕ್ಕೆ

(ಮೊದಲ ಪುಟದಿಂದ) ಈ ವ್ಯಾಪ್ತಿಯಲ್ಲಿ ೨೦ ಕ್ಕೂ ಅಧಿಕ ಕಾಡಾನೆಗಳು ತೋಟದಲ್ಲೇ ಸಂಚಾರ ನಡೆಸುತ್ತಿದ್ದು, ಈ ವ್ಯಾಪ್ತಿಯಲ್ಲಿರುವ ಕಾಡಾನೆಗಳಲ್ಲಿ ಒಂದೆರಡು ಕಾಡಾನೆ ಕುಂಟುತ್ತಾ ಸಂಚರಿಸುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ವ್ಯಾಪ್ತಿಯ ಹಲವಾರು ಕುಟುಂಬಸ್ಥರ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಟ್ಟು ದಾಂಧಲೆ ನಡೆಸಿದ್ದು ಇದರಿಂದ ಗ್ರಾಮದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮದಲ್ಲಿ ನಡೆದಾಡಲು ಗ್ರಾಮಸ್ಥರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾರ್ಮಿಕರು ಕೂಡ ತೋಟಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.ಗ್ರಾಮದಲ್ಲಿ ಇಷ್ಟೆಲ್ಲ ಹಾನಿ ಸಂಭವಿಸುತಿದ್ದರು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ.

ಕೂಡಲೇ ಅರಣ್ಯ ಇಲಾಖೆ ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳಬೇಕು. ನಷ್ಟಕ್ಕೊಳಗಾದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. -ಅಶ್ರಫ್