ಚೆಟ್ಟಳ್ಳಿ, ಜು. ೧೨: ಅದಷ್ಟೋ ಯೋಧರನ್ನು ದೇಶಸೇವೆಗಾಗಿ ನೀಡಿದ ಪುಣ್ಯಭೂಮಿ ಕೊಡಗು. ಈ ಮಣ್ಣಿನಲ್ಲಿ ದೇಶ ಸೇವೆ ಸಲ್ಲಿಸುತ್ತಿರುವ ಯೋಧರು, ಹಲವು ನಿವೃತ್ತ ಯೋಧರಿದ್ದಾರೆ. ಯುದ್ಧ ಭೂಮಿಯಲ್ಲಿ ಶತ್ರುವಿನ ಗುಂಡಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ ಅಮರಯೋಧರಿಗೇನೂ ಕಮ್ಮಿ ಇಲ್ಲ. ಆದರೆ ಯೋಧರ ಹುಟ್ಟೂರಿನಲ್ಲೇ ಹಲವು ಅಮರ ಯೋಧರನ್ನು ಮರೆತೆ ಹೋಗಿರುವುದು ಮಾತ್ರ ವಿಪರ್ಯಾಸ. ಜಿಲ್ಲೆಯಲ್ಲೇ ಮರೆತು ಹೋದ ಅಮರಯೋಧ ಕ್ಯಾಪ್ಟನ್ ಪೆಮ್ಮಂಡ ಮಧು ಪೂವಯ್ಯ ಅವರ ಸ್ಮರಣೆಯಿದು...
ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕು ತೂಚಮಕೇರಿ ಗ್ರಾಮದ ದಿ. ಪೆಮ್ಮಂಡ ಮಾಚಯ್ಯ ಮತ್ತು ಸೀತಮ್ಮ (ಕೊಡಂದೆರ) ಅವರ ಸುಪುತ್ರನಾಗಿ ೨೬.೦೨.೧೯೪೭ರಲ್ಲಿ ಜನಿಸಿದ ಮಧು ಪೂವಯ್ಯ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಪೊನ್ನಂಪೇಟೆಯಲ್ಲೂ ಪದವಿಯನ್ನು ಮೈಸೂರಿನ ಸೈಂಟ್ ಫಿಲೋಮಿನಾಸ್ ಕಾಲೇಜಿನಲ್ಲಿ ಮುಂದುವರೆಸಿದರು. ವಿದ್ಯಾರ್ಥಿ ಜೀವನದಲ್ಲೇ ಅವರಿಗೆ ಎನ್.ಸಿ.ಸಿ. ಯ ಶಿಸ್ತಿನ ಜೀವನ ಇಷ್ಟಪಟ್ಟು ಬಿ ಮತ್ತು ಸಿ ಗ್ರೇಡ್ ಸರ್ಟಿಫಿಕೇಟ್ ಪಡೆದವರಾಗಿದ್ದರು.
ಪದವಿಯನ್ನು ಓದುತ್ತಿರುವಾಗಲೇ ೧೯೬೬ರಲ್ಲಿ ಶಾರ್ಟ್ ಸರ್ವೀಸ್ ಕಮಿಷÀನ್ ಅಧಿಕಾರಿಯಾಗಿ ಭಾರತೀಯ ಸೇನೆಗೆ ಸೇರಿದರು (ಎಸ್.ಎಸ್. ೨೦೬೪೩). ೧೯೭೧ ರ ಯುದ್ಧ ಸಮಯದಲ್ಲಿ ಅವರು ೧೯ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರಿಗೆ ಮೇಜರ್ ಪದವಿಗೆ ಬಡ್ತಿ ದೊರೆತಿತ್ತು. ಯುದ್ದ ಸಮಯದಲ್ಲಿ ಪಶ್ಚಿಮಗಡಿಯ ತೇಜ್ಪುರಕ್ಕೆ ನಿಯೋಜನೆಗೊಳ್ಳುತ್ತಾರೆ. ಅಲ್ಲಿ ತಮ್ಮ ಪ್ಲಟೂನ್ ಜೊತೆ ಶತ್ರುಗಳನ್ನು ಎದುರಿಸುತ್ತಾ, ೪೨ ಬ್ರಿಗೇಡನ್ನು ತಾರ್ಜಪುರದಿಂದ ಜಸ್ವರ್ ಕುಲುವಿನ ಮಾರ್ಗವಾಗಿ ಬೈರಬ್ ನದಿಯನ್ನು ಶ್ಯಾಮ್ ಗಂಜ್ ಫೆರಿ ಮೂಲಕ ದಾಟುತ್ತಿದ್ದರು. ಅವರು ಏ ಕಂಪೆನಿಯನ್ನು ಮುನ್ನಡೆಸುತ್ತಾ ವೈಯರ್ಲೆಸ್ ಮೂಲಕ ಪರಿಸ್ಥಿತಿಯ ಮಾಹಿತಿ ನೀಡುತ್ತಿದ್ದರು. ಆ ಯುದ್ದದ ಸಮಯದಲ್ಲಿ ಪಾಕ್ ಸೇನೆಯ ಗುಂಡು ತಲೆಯ ಭಾಗಕ್ಕೆ ತಗುಲಿ ಯುದ್ದ ಭೂಮಿಯಲ್ಲೇ ಬಲಿಯಾಗಿ ಮಾತೃಭೂಮಿಯ ರಕ್ಷಣೆಯಲ್ಲಿ ಪ್ರಾಣತ್ಯಾಗ ಮಾಡಿ ಹುತಾತ್ಮರಾದರು.
ದೆಹಲಿಯ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಸ್ತಂಭದಲ್ಲಿ ಕೊಡಗಿನ ಈ ಹುತಾತ್ಮ ಯೋಧನ ಹೆಸರಿದೆ, ಆದರೆ ವಿಪರ್ಯಾಸವೆಂದರೆ ಅವರ ಹುಟ್ಟು ಜಿಲ್ಲೆ, ಸೈನಿಕರ ಬೀಡು ವೀರರ ನಾಡು ಎಂದೇ ಖ್ಯಾತಿ ಹೊಂದಿದ ಕೊಡಗಿನಲ್ಲಿ ಯಾವುದೇ ತರಹÀದ ಸ್ಮಾರಕವಾಗಲೀ, ಪುತ್ತಳಿಯಾಗಲೀ, ಕನಿಷ್ಟ ಅವರ ಹೆಸರಿನ ಪ್ರಸ್ತಾವೇ ಇಲ್ಲದಂತಾಗಿದೆ. ಈ ವೀರ ಯೋಧನ ಹೆಸರನ್ನು ಶಾಶ್ವತವಾಗಿ ನೆನಪಿಸಿಕೊಳ್ಳುವಂತ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಲು ವೀರಯೋಧನ ಹುಟ್ಟೂರಿನಲ್ಲೇ ಸ್ಮಾರಕ ಅಥವಾ ರಸ್ತೆಗೆ ಇವರ ಹೆಸರು ನಾಮಕರಣ ಆಗಬೇಕೆಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ ಒತ್ತಾಯಿಸಿದ್ದಾರೆ.
-ಪುತ್ತರಿರ ಕರುಣ್ ಕಾಳಯ್ಯ