ಕೂಡಿಗೆ, ಜು. ೧೨: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಇವರ ಸಹಯೋಗದೊಂದಿಗೆ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎರಡು ದಿನಗಳ ವೃತ್ತಿ ಯೋಜನೆಯ ತರಬೇತಿ ಕಾರ್ಯಾಗಾರವನ್ನು ಶಿಕ್ಷಕರಿಗೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಸಮನ್ವಯ ಅಧಿಕಾರಿ ಭಾರತಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ವೃತ್ತಿ ಯೋಜನೆ ಕಾರ್ಯಕ್ರಮ ಹಿಂದಿನ ವರ್ಷದಿಂದಲೂ ನಡೆಯುತ್ತಿದ್ದು, ಇದರ ಉಪಯೋಗ ಮಕ್ಕಳಿಗೆ ತಲುಪುತ್ತಿದೆ. ೮, ೯ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಲ್ಲಿ ಕೆಲಸದ ಆಸಕ್ತಿಗಳನ್ನು ಗುರುತಿಸುವುದು, ವೃತ್ತಿ ಆಯ್ಕೆಗಳನ್ನು ತಿಳಿದುಕೊಳ್ಳುವುದು, ಅದಕ್ಕೆ ಸಂಬAಧಿಸಿದ ಶೈಕ್ಷಣಿಕ ಆಯ್ಕೆಗಳನ್ನು ಅಧ್ಯಯನ ಮಾಡುವಂತೆ ಹಾಗೂ ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಸ್ತವಿಕವಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್ ಮಾತನಾಡಿ, ಮಕ್ಕಳಿಗೆ ತಮ್ಮ ಪ್ರೌಢಶಾಲಾ ಹಂತದಲ್ಲೇ ಆಸಕ್ತಿಗನುಗುಣವಾಗಿ ಗುರಿಯನ್ನು ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್‌ನ ತರಬೇತುದಾರ ಸಿದ್ದೇಶ್ ಎಸ್. ಮಾತನಾಡಿ, ಎಲ್ಲಾ ವಸತಿ ಶಾಲೆಗಳಲ್ಲಿನ ಮಕ್ಕಳು ವೃತ್ತಿ ವಲಯಗಳು ಹಾಗೂ ಮತ್ತು ವೃತ್ತಿ ಯೋಜನೆ ಬಗ್ಗೆ ಈಗಲಿಂದಲೇ ಯೋಜಿಸುವುದು ಬಹಳ ಮುಖ್ಯ. ೨೦೩೦ ರ ವೇಳೆಗೆ ಎರಡು ಕೋಟಿ ವಿದ್ಯಾರ್ಥಿ ಗಳಿಗೆ ಈ ಮಾಹಿತಿ ತಲುಪ ಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿಭಾಗೀಯ ಮುಖ್ಯಸ್ಥ ಡಿ.ಕೆ. ಪ್ರಸನ್ನ ಕುಮಾರ್ ಮಾತನಾಡಿ, ಉದ್ಯೋಗ ಹಾಗೂ ಅದಕ್ಕೆ ಬೇಕಾದ ಕೌಶಲ್ಯಗಳ ನಡುವೆ ಉಂಟಾದ ಬಿರುಕನ್ನು ಹೋಗ ಲಾಡಿಸಲು ಹಾಗೂ ವಿದ್ಯಾರ್ಥಿಗಳು ಯೋಜಿತ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಕೆಲಸದಲ್ಲಿ ತೃಪ್ತಿ ಮತ್ತು ಸಂತೋಷವನ್ನು ಪಡುವುದರ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆ ಸಲ್ಲಿಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಅನಾಹತ ಯುನೈಟೆಡ್ ಸಂಸ್ಥೆಯ ತರಬೇತುದಾರ ರಾಘವೇಂದ್ರ ವಿ.ಎಸ್., ಶಾಲೆಯ ಶಿಕ್ಷಕರಾದ ಕೆ. ಅಮೃತ, ದಿನೇಶ್ ಆಚಾರ್ ಹಾಗೂ ಜಿಲ್ಲೆಯ ೭ ವಸತಿ ಶಾಲೆಗಳಿಂದ ೧೪ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಮೃತ್ ಸ್ವಾಗತಿಸಿ, ವಂದಿಸಿದರು.