ಮಡಿಕೇರಿ, ಜು. ೧೩: ಮಂಗಳಾದೇವಿ ನಗರಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಅಲ್ಲಿನ ವಾಸ್ತವ ವಿಚಾರಗಳ ಬಗ್ಗೆ ಮಾಹಿತಿ ಪಡೆದರು.

ನಗರದ ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲವಿ ಕೆ.ಎಫ್. ಅವರು ಕಳೆದ ವರ್ಷಗಳಿಂದ ಮಂಗಳಾದೇವಿ ನಗರದಲ್ಲಿ ವಾಸವಿದ್ದು, ಅವರ ಮನೆಯ ಹಿಂಬದಿಯ ಬರೆ ಕುಸಿದು ಮನೆ ಕೂಡ ಅಪಾಯದ ಅಂಚಿಗೆ ಸಿಲುಕಿದೆ. ಮಂಗಳಾದೇವಿನಗರ ವಾಸಕ್ಕೆ ಯೋಗ್ಯವಿಲ್ಲವೆಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿ ನೀಡಿತ್ತು.

ಈ ಹಿನ್ನೆಲೆಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಲವಿ ಸೇರಿದಂತೆ ಅಲ್ಲಿ ವಾಸವಿರುವ ಕುಟುಂಬಗಳು ಶಾಸಕರ ಬಳಿ ತಮ್ಮ ಅಸಹಾಯಕ ಪರಿಸ್ಥಿತಿ ಕುರಿತು ಅಳಲು ತೋಡಿಕೊಂಡರು. ಸ್ಥಳದಲ್ಲಿ ವಾಸಿಸುತ್ತಿರುವ ಕುಟುಂಬಸ್ಥರು ಬೇರೆಡೆಗೆ ಕೂಡಲೇ ಸ್ಥಳಾಂತರಗೊಳ್ಳುವAತೆ ಶಾಸಕರು ಸಲಹೆ ನೀಡಿದರು. ಲವಿ ಅವರಿಗೆ ಮನೆಯ ಹಕ್ಕು ಪತ್ರವಿದ್ದರೂ ಸಹ ಸರಕಾರದಿಂದ ಮನೆ ದೊರಕದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ. ಮಂತರ್ ಗೌಡ, ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ಮನೆ ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ. ನಂದಕುಮಾರ್, ನಗರಸಭೆ ಸದಸ್ಯರಾದ ಮುದ್ದುರಾಜ್, ಜಗದೀಶ್ ಇತರರು ಹಾಜರಿದ್ದರು.