ಸೋಮವಾರಪೇಟೆ, ಜು. ೧೪: ಅಧ್ಯಾತ್ಮಿಕ ಚಿಂತಕ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸೋಮವಾರಪೇಟೆ ಘಟಕದ ಉದ್ಘಾಟನೆ ಪಟ್ಟಣದ ಕ್ಲಬ್ ರಸ್ತೆಯಲ್ಲಿರುವ ಜೇನು ಸೊಸೈಟಿ ಕಟ್ಟಡದಲ್ಲಿ ನಡೆಯಿತು.
ವಾಣಿಜ್ಯ ಸಂಕೀರ್ಣದ ಪ್ರಥಮ ಅಂತಸ್ತಿನಲ್ಲಿ ತೆರೆಯಲಾಗಿರುವ ಜೀವನ ಕಲಾ ಸಂಸ್ಥೆಯ ನೂತನ ಘಟಕವನ್ನು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೋರ್ವರಿಗೂ ಯೋಗ, ಧ್ಯಾನ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿAದ ಸ್ಥಳೀಯವಾಗಿ ಸಾರ್ವಜನಿಕರಿಗೆ ಉಪಯೋಗ ಕಲ್ಪಿಸುವ ನಿಟ್ಟಿನಲ್ಲಿ ಘಟಕ ಆರಂಭಿಸಿರುವುದು ಶ್ಲಾಘನೀಯ ಎಂದರು.
ಪ್ರತಿಯೋರ್ವರೂ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎಂಬುದನ್ನು ಮನಗಾಣಬೇಕು. ಸಂಸ್ಥೆಯ ವತಿಯಿಂದ ಉಚಿತ ಯೋಗಾಭ್ಯಾಸದಂತಹ ಕಾರ್ಯ ಕ್ರಮಗಳು ನಡೆಯುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ನೂತನ ಘಟಕ ಉದ್ಘಾಟನೆ ಅಂಗವಾಗಿ ಕೇಂದ್ರದಲ್ಲಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹೋಮ ನಡೆಯಿತು. ಘಟಕದ ಮುಖ್ಯಸ್ಥೆ ಹಾಗೂ ಆರ್ಟ್ ಆಫ್ ಲಿವಿಂಗ್ನ ಶಿಕ್ಷಕಿ ರಾಗಿಣಿ ಹಾಗೂ ಬಾಳೆಲೆಯ ಶಿಕ್ಷಕಿ ಭವಾನಿ ನಾಣಯ್ಯ ಅವರ ನೇತೃತ್ವದಲ್ಲಿ ಶ್ರೀಗುರುಪೂಜೆ, ಸತ್ಸಂಗ ನೆರವೇರಿತು.
ಈ ಸಂದರ್ಭ ಹೋಂ ಸ್ಟೇ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸಿ.ಕೆ. ರೋಹಿತ್, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ಕುಮಾರ್, ಗೌಡಳ್ಳಿ ಗ್ರಾ.ಪಂ. ಸದಸ್ಯ ನವೀನ್ ಅಜ್ಜಳ್ಳಿ, ಕೂಗೂರು ಕೊಮಾರಪ್ಪ, ಜೇನು ಸೊಸೈಟಿಯ ನಿರ್ದೇಶಕರಾದ ಬೋಪಣ್ಣ, ಗೋಪಾಲ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಚಂದ್ರಿಕಾ ಕುಮಾರ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.