ಗೋಣಿಕೊಪ್ಪಲು, ಜು. ೧೪: ರಾಜ್ಯ ಸರಕಾರ ಜಾರಿ ಮಾಡಿದ ಶಕ್ತಿ ಸೇರಿದಂತೆ ಪಂಚ ಗ್ಯಾರಂಟಿಗಳ ಸದುದ್ದೇಶ ಈಡೇರಿದ್ದು, ಮಧ್ಯಮ ಹಾಗೂ ಬಡ ವರ್ಗಕ್ಕೆ ಸಹಕಾರಿಯಾಗಿದೆ ಎಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಹೇಳಿದರು.

ಶಕ್ತಿ ಯೋಜನೆಯಡಿ ೫೦೦ ಕೋಟಿ ಪ್ರಯಾಣಿಕರು ಪ್ರಯಾಣ ಮಾಡಿದ ಹಿನ್ನೆಲೆ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಜರುಗಿದ ಸಂಭ್ರಮಾಚರಣೆಯಲ್ಲಿ ಮಾತನಾಡಿದರು.

ಸರ್ಕಾರ ಐದು ಗ್ಯಾರಂಟಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದು ಇದರಲ್ಲಿ 'ಶಕ್ತಿ' ಯೋಜನೆ ಅತ್ಯಂತ ಫಲಪ್ರದವಾಗಿದೆ. ಈ ಯೋಜನೆಯನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು.

ಕೊಡಗು ಜಿಲ್ಲೆಯಲ್ಲಿ ೫೨೦ ಕೋಟಿ ಹಣದ ವಹಿವಾಟು ಸರ್ಕಾರಿ ಬಸ್ ಪ್ರಯಾಣದಿಂದ ಆಗಿದೆ ಎಂದರು. ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್ ಮಾತನಾಡಿ, ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಜನರಿಗೆ ತಲುಪುತ್ತಿದೆ ಎಂದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಗೋಣಿಕೊಪ್ಪ ಗ್ರಾ.ಪಂ.ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ,ಉಪಾಧ್ಯಕ್ಷೆ ಎಂ.ಮAಜುಳಾ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ತಾಲೂಕು ಪಂಚಾಯಿತಿ ಇಒ ಕೆ.ಸಿ. ಅಪ್ಪಣ್ಣ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪಿ.ಆರ್.ಪಂಕಜ ಸೇರಿದಂತೆ ಇನ್ನಿತರರು ಹಾಜರಿದ್ದರು.