ಮಡಿಕೇರಿ, ಜು. ೧೪: ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸ್ಥಾಪಕ ಸಂಪಾದಕ ಕಲ್ಯಾಟಂಡ ಬಿ. ಗಣಪತಿ ಅವರ ನಿಧನಕ್ಕೆ ಕೊಡಗು ಪತ್ರಕರ್ತರ ಸಂಘದಿAದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯ ಪತ್ರಕರ್ತನ ಅಗಲಿಕೆಗೆ ಸಂಘದ ಮೂಲಕ ಪತ್ರಕರ್ತರು, ಸಂಘ ಸಂಸ್ಥೆಗಳ ಪ್ರಮುಖರು ನುಡಿನಮನ ಸಲ್ಲಿಸಿದರು.

ನಗರದ ಪತ್ರಿಕಾಭವನದಲ್ಲಿ ಕೊಡಗು ಪತ್ರಕರ್ತರ ಸಂಘದಿAದ ಆಯೋಜಿತ ದಿ. ಗಣಪತಿ ಅವರಿಗೆ ಸಂತಾಪ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜಿ. ರಾಜೇಂದ್ರ, ಮೇರು ವ್ಯಕ್ತಿತ್ವದ ಗಣಪತಿಯವರ ಅಗಲಿಕೆ ಪತ್ರಿಕೋದ್ಯಮ ಮಾತ್ರವಲ್ಲದೇ ಸಮಾಜಕ್ಕೂ ಸಾಕಷ್ಟು ನಷ್ಟ ಉಂಟುಮಾಡಿದೆ. ಯಾರನ್ನೂ ದ್ವೇಷಿಸದ, ಯಾರನ್ನೂ ದೂಷಿಸದ ಗಣಪತಿ ಅವರಲ್ಲಿದ್ದ ಸದ್ಗುಣ ಇತರರಿಗೂ ಆದರ್ಶಪ್ರಾಯವಾದದ್ದು ಎಂದರಲ್ಲದೆ, ಗಣಪತಿ ಅವರು, ಪರಿಸರ ಕಾಳಜಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಸುಸಂಸ್ಕೃತ ವ್ಯಕ್ತಿತ್ವದ ಮೇಧಾವಿಯಾಗಿದ್ದರು ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ಬೈಶ್ರೀ ಪ್ರಕಾಶ್ ಮಾತನಾಡಿ, ೪ ವರ್ಷಗಳ ಕಾಲ ಮೈಸೂರು ಮಿತ್ರದ ಕೊಡಗು ವರದಿಗಾರನಾಗಿ ಕಾರ್ಯನಿರ್ವಹಿಸಿದ ದಿನಗಳು ಅವಿಸ್ಮರಣೀಯವಾಗಿದ್ದು, ಅನೇಕ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡಿದರೂ ಪ್ರಚಾರವನ್ನು ಎಂದಿಗೂ ಬಯಸದ ವಿಶೇಷ ಸ್ವಭಾವ ಗಣಪತಿಯವರದ್ದಾಗಿತ್ತು ಎಂದು ನುಡಿದರು.

ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ ಮಾತನಾಡಿ, ಸಣ್ಣ ಪತ್ರಿಕೆಗಳ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಣಪತಿಯವರು ಅಪಾರ ತಾಳ್ಮೆ ಮತ್ತು ಉತ್ಸಾಹ ತೋರುತ್ತಿದ್ದರು. ಸಾಕಷ್ಟು ದೇಶಗಳಿಗೆ ಪ್ರವಾಸ ಮಾಡಿದ್ದ ಗಣಪತಿಯವರ ಅನುಭವದ ಆಧಾರದಲ್ಲಿ ಪ್ರಕಟಿತ ಕೃತಿಗಳು ದಾಖಲಾರ್ಹವಾಗಿವೆ ಎಂದರು. ಇತರ ಲೇಖಕರ ಕೃತಿಗೂ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸುತ್ತಿದ್ದರು ಎಂದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಮಾತನಾಡಿ, ಮೈಸೂರಿನಲ್ಲಿ ಭಾರತೀಯ ವಿದ್ಯಾಭವನಕ್ಕೆ ಎರಡು ವರ್ಷಗಳಿಂದ ಅಧ್ಯಕ್ಷರಾಗಿದ್ದ ಗಣಪತಿಯವರು ಸಾಕಷ್ಟು ಹೊಸತನದಿಂದ ವಿದ್ಯಾಭವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕಿರಿಯರಿಂದಲೂ ಸಲಹೆಗಳನ್ನು ಕೇಳಿ ಸರಿಕಂಡರೆ ಅದನ್ನು ಪಾಲಿಸುವ ಅಪರೂಪದ ವ್ಯಕ್ತಿತ್ವ ಗಣಪತಿಯವ ರದ್ದಾಗಿತ್ತು ಎಂದು ಸ್ಮರಿಸಿದರು.

ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಮಾತನಾಡಿ, ಕೊಡಗಿನಲ್ಲಿ ಬಿ.ಎಸ್ ಗೋಪಾಲಕೃಷ್ಣ ಪತ್ರಿಕೋದ್ಯಮದ ಬೀಷ್ಮ ಎಂಬ ಹೆಗ್ಗಳಿಕೆ ಪಡೆದಂತೆ ಮೈಸೂರಿನಲ್ಲಿ ಕಲ್ಯಾಟಂಡ ಗಣಪತಿ ಮೈಸೂರು ಪತ್ರಿಕೋದ್ಯಮದ ಭೀಷ್ಮ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕೊಡಗಿನಿಂದ ತೆರಳಿ ಮೈಸೂರಿನಲ್ಲಿ ಎರಡೂ ಪತ್ರಿಕೆಗಳನ್ನು ಪ್ರಭಾವಶಾಲಿಯಾಗಿ ರೂಪಿಸಿದ್ದು ಸಾಧಾರಣ ಸಾಹಸವೇನಲ್ಲ ಎಂದು ವರ್ಣಿಸಿದರು. ಮತ್ತೊಂದು ಪತ್ರಿಕೆಯಲ್ಲಿ ಮತ್ತೋರ್ವರ ಬರಹವನ್ನು ಗಮನಿಸಿ, ಅದನ್ನು ಶ್ಲಾಘಿಸಿ ಪ್ರೋತ್ಸಾಹಿಸುವ ದೊಡ್ಡಗುಣ ಗಣಪತಿಯವರಲ್ಲಿತ್ತು ಎಂದು ಹೇಳಿದ ಚಿದ್ವಿಲಾಸ್, ಪತ್ರಿಕೋದ್ಯಮದಂತೆ ತಾವು ತೊಡಗಿಸಿಕೊಂಡ ಸಾಮಾಜಿಕ ಸೇವಾ ಕಾರ್ಯಗಳಲ್ಲಿಯೂ ಕೆಬಿಜಿ ಯಶಸ್ಸು ಕಂಡಿದ್ದರು ಎಂದರು.

ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರಾಜ್ಯದಲ್ಲಿಯೇ ಇಂಗ್ಲೀಷ್ ಭಾಷೆಯಲ್ಲಿ ನಾಲ್ಕೂವರೆ ದಶಕಗಳ ಕಾಲ ಗಣಪತಿಯವರ ಹಾಗೇ ಅಂಕಣ ಬರಹಗಳನ್ನು ಬರೆದ ಮತ್ತೋರ್ವ ಪತ್ರಕರ್ತನಿಲ್ಲ. ಅರಮನೆ ನಗರವಾದ ಮೈಸೂರಿನಲ್ಲಿ ಪತ್ರಿಕೋದ್ಯಮಿ ಯಾಗಿದ್ದರೂ ಕೊಡಗು, ಕೊಡವ ಸಂಸ್ಕೃತಿ ಬಗ್ಗೆ ಸಾಕಷ್ಟು ಪ್ರಚಾರ ನೀಡುವ ಮೂಲಕ ಮೈಸೂರು - ಕೊಡಗಿನ ಬೆಸುಗೆಯಂತೆ ಗಣಪತಿ ಕಂಗೊಳಿಸಿದ್ದರು ಎಂದು ಹೇಳಿದರು. ಮೈಸೂರಿನಲ್ಲಿ ಪತ್ರಿಕೋದ್ಯಮದ ಗರಡಿ ಮನೆಯಂತೆ ತಮ್ಮ ಪತ್ರಿಕಾಲಯವನ್ನು ರೂಪಿಸಿದ್ದ ಗಣಪತಿಯವರ ಮಾರ್ಗದರ್ಶನದಲ್ಲಿ ತಯಾರಾದ ಪತ್ರಕರ್ತರು ರಾಷ್ಟçವ್ಯಾಪಿ ಖ್ಯಾತಿಗಳಿಸಿದ್ದು ಗಣಪತಿಯವರ ತರಬೇತಿ ಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ನುಡಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಮಾತನಾಡಿ, ಮುಕ್ತ ರೀತಿಯ ಸರಳ ಶೈಲಿಯ ಗಣಪತಿಯವರ ಬರವಣಿಗೆ ಯುವ ಪತ್ರಕರ್ತರಿಗೆ ಮಾರ್ಗದರ್ಶಕವಾಗಿದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆಕಟ್ಟೆ ಮಾತನಾಡಿ, ಗುರು ಸಮಾನರಾಗಿದ್ದ ಗಣಪತಿಯವರಿಂದ ಕಲಿತ ವಿದ್ಯೆ ವೃತ್ತಿ ಜೀವನದುದ್ದಕ್ಕೂ ಮಾದರಿಯಾಗಿರುತ್ತದೆ ಎಂದರು.

ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ಕೊಡಗು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಟಿ.ಜಿ. ಸತೀಶ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ಜೀವನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ರೋಟರಿ ವುಡ್ಸ್ ನಿರ್ದೇಶಕ ವಸಂತ್ ಕುಮಾರ್, ಯೋಗಗುರು ಕೆ.ಕೆ. ಮಹೇಶ್ ಕುಮಾರ್, ಲಯನ್ಸ್ ಕ್ಲಬ್ ನಿರ್ದೇಶಕ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಸಂಘದ ಜಿಲ್ಲಾ ನಿರ್ದೇಶಕರಾದ ಗುರುದರ್ಶನ್, ರಂಜಿತ್ ಕವಲಪಾರ, ಶಿವಪ್ಪ, ಹೆಚ್.ಟಿ. ಅರುಣ್ ಕೂರ್ಗ್, ಪ್ರವೀಣ್ ಕುಮಾರ್, ಎಚ್.ಎನ್. ಲಕ್ಷಿö್ಮÃಶ್, ಸದಸ್ಯ ದಕ್ಷಿಣಮೂರ್ತಿ, ಶಿವಪ್ರಸಾದ್, ಬಿ.ಎಸ್. ದಿನೇಶ್ ಹಾಜರಿದ್ದರು. ಕೆ.ಬಿ. ಗಣಪತಿಯವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.