ಶನಿವಾರಸಂತೆ, ಜು.೧೪ : ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲಕೊಡ್ಲಿ ಗ್ರಾಮದಲ್ಲಿ ಮನೆಯ ಕಾಲಿಂಗ್ ಬೆಲ್ ಆದಾಗ ಬಾಗಿಲು ತೆರೆದು ಹೊರ ಬಂದ ಗೃಹಿಣಿಯ ಕೊರಳಲ್ಲಿದ್ದ ರೂ. ೩.೫೦ ಲಕ್ಷ ಮೌಲ್ಯದ ೪೦ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಿಸಿ ಓಡಿಹೋದ ಪ್ರಕರಣ ಭಾನುವಾರ ನಡೆದಿದೆ.

ಅಭಿಲಾಷ್ ಎಂಬವರ ಪತ್ನಿ ಎಚ್.ಎಂ. ಹರ್ಷಿತಾ ಚಿನ್ನದ ಸರ ಕಳೆದು ಕೊಂಡ ಗೃಹಿಣಿ. ಅಭಿಲಾಷ್ ಭಾನುವಾರ ಮಧ್ಯಾಹ್ನ ೩-೩೦ ರ ಸಮಯದಲ್ಲಿ ತೋಟ ಕಾರ್ಮಿಕರಿಗೆ ಸಂಬಳ ನೀಡಲು ಹಾಗೂ ಮನೆಗೆ ಬೇಕಾದ ಸಾಮಗ್ರಿ ಗಳನ್ನು ತರಲು ಕೊಡ್ಲಿಪೇಟೆಗೆ ಹೋಗಿದ್ದರು. ಮನೆಯಲ್ಲಿ ಹರ್ಷಿತಾ ಮತ್ತು ಅವರ ಪುತ್ರ ಸನದ್ ಪಟೇಲ್ ಇಬ್ಬರೇ ಇದ್ದು ಸಂಜೆ ೬ ಗಂಟೆಯ ವೇಳೆಗೆ ಮನೆಯ ಕಾಲಿಂಗ್ ಬೆಲ್ ಒತ್ತಿದಾಗ ಯಾರಿರಬಹುದು ಎಂದು ಹರ್ಷಿತಾ ಬಾಗಿಲು ತೆರೆದು ಹೊರಗಡೆ ಬಂದಾಗ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಹರ್ಷಿತಾರನ್ನು “ಸಾರ್ ಇಲ್ಲವಾ ?’’ ಎಂದು ಪ್ರಶ್ನಿಸಿದ್ದಾನೆ. ಆಗ ಹರ್ಷಿತಾ ನೀವು ಯಾರು ಎಂದು ಕೇಳಿದಾಗ ವ್ಯಕ್ತಿ ನಾವು ಗೊಬ್ಬರದವರು ಎಂದು ಹೇಳುತ್ತಲೇ ಏಕಾಏಕಿ ಹರ್ಷಿತಾರವರ ಕುತ್ತಿಗೆಗೆ ಕೈಹಾಕಿ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು, ಅವರನ್ನು ತಳ್ಳಿ ಓಡಿ ಹೋಗಿದ್ದಾನೆ. ಗಾಬರಿಯಿಂದ ಕಿರುಚಿಕೊಂಡಿದ್ದಾರೆ. ಒಳಗೆ ಓಡಿಬಂದ ಹರ್ಷಿತಾ ಪತಿ ಅಭಿಲಾಷ್‌ಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹರ್ಷಿತಾ ನೀಡಿದ ದೂರಿನ ಹಿನ್ನೆಲೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.