ಮಡಿಕೇರಿ, ಜು. ೧೪: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಎರಡು ವರ್ಷ ಪೂರೈಸಿದ್ದು, ಎರಡು ವರ್ಷದಲ್ಲಿ ರಾಜ್ಯಾದ್ಯಂತ ೫೦೦ ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದನ್ನು ಸಂಭ್ರಮಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ಸೂಚನೆಯಂತೆ ರಾಜ್ಯದ ಎಲ್ಲ ಸಾರಿಗೆ ಸಂಸ್ಥೆ ಡಿಪೋ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಇಂದು ಸಂಭ್ರಮಾಚರಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲೂ ೧.೨೦ ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದು, ನಿಗಮಕ್ಕೆ ರೂ. ೫೦೦ ಕೋಟಿಗೂ ಅಧಿಕ ಲಾಭ ಬಂದಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕುಗಳ ಬಸ್ ನಿಲ್ದಾಣಗಳಲ್ಲಿ ಆಯಾ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರುಗಳ ಸಮ್ಮುಖದಲ್ಲಿ ಸಾರಿಗೆ ಬಸ್ಗಳನ್ನು ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಲಾಯಿತು. ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಈ ಸಂದರ್ಭದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷÀ ಮಂದ್ರಿರ ಮೋಹನ್ ದಾಸ್ ಅವರು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ನಾಡಿನ ಮಹಿಳೆಯರ ಸ್ವಾವಲಂಬನೆ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇದು ಗ್ಯಾರಂಟಿ ಯೋಜನೆ ಯಶಸ್ವಿಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರಾ ಮೈನಾ ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ೫೦೦ ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿರುವ ಹಿನ್ನೆಲೆ ಒಂದು ರೀತಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಎಂದರು.
ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದ್ದು, ಒಂದು ರೀತಿ ಹೆಮ್ಮೆಯಿದೆ. ಶಕ್ತಿ ಯೋಜನೆಯು ಪ್ರತಿ ಮಹಿಳೆಯರ ಕನಸುಗಳನ್ನು ನನಸಾಗಿಸಿ, ನಿಜಾರ್ಥದಲ್ಲಿ ಅವರ ಬದುಕಿಗೆ ಶಕ್ತಿ ತುಂಬಿದೆ ಎಂದು ನುಡಿದರು.
ಪ್ರಾಧಿಕಾರದ ಸದಸ್ಯರುಗಳಾದ ಪ್ರಭು ರೈ, ಫ್ಯಾನ್ಸಿ ಪಾರ್ವತಿ, ರಾಜೇಶ್ವರಿ, ಇಬ್ರಾಹಿಂ, ರಘು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಸದಸ್ಯ ಕಾನೆಹಿತ್ಲು ಮೊಣ್ಣಪ್ಪ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿದೇವಯ್ಯ, ನಗರಸಭಾ ಸದಸ್ಯ ಜಗದೀಶ್, ಸದಾ ಮುದ್ದಪ್ಪ, ರಾಜು, ಪಿಯೂಶ್ ಪೆರೇರ, ಸಿರಾಜ್, ದಯಾನಂದ, ಉದಯಕುಮಾರ್, ಮಡಿಕೇರಿ ಘಟಕ ವ್ಯವಸ್ಥಾಪಕ ಎಂ.ಎA.ಮೆಹಬೂಬ್ ಆಲಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಖರ್, ಘಟಕದ ಸಿಬ್ಬಂದಿ ವರ್ಗದವರು, ಪ್ರಯಾಣಿಕರು ಹಾಜರಿದ್ದರು. ಇದೇ ಸಂದರ್ಭ ಬಸ್ನ ಚಾಲಕ ಹಾಗೂ ನಿರ್ವಾಹಕರನ್ನು ಸನ್ಮಾನಿಸಲಾಯಿತು.
ಸೋಮವಾರಪೇಟೆ,ಜು.೧೪: ಶಕ್ತಿ ಯೋಜನೆಯಡಿ ೫೦೦ ಕೋಟಿಗೂ ಅಧಿಕ ಮಹಿಳೆಯರು, ವಿದ್ಯಾರ್ಥಿನಿಯರು ಸರ್ಕಾರಿ ಬಸ್ನಲ್ಲಿ ಉಚಿತವಾಗಿ ಪ್ರಯಾಣ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಯಿತು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿರುವ ಏಕೈಕ ಸರಕಾರ ಎಂಬ ಹೆಮ್ಮೆ ಕರ್ನಾಟಕ ರಾಜ್ಯ ಸರಕಾರಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಸಾರಿಗೆ ನಿಗಮಕ್ಕೂ ಹೆಚ್ಚಿನ ಲಾಭ ಉಂಟಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಎಲ್ಲಾ ವರ್ಗದವರ ಮನೆ ಮನೆಗೆ ರಾಜ್ಯ ಸರಕಾರದ ಯೋಜನೆಗಳು ತಲುಪಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಇಡೀ ದೇಶದಲ್ಲಿಯೇ ಉತ್ತಮ ಆಡಳಿತವನ್ನು ನೀಡಿರುವ ಏಕೈಕ ರಾಜ್ಯವಾಗಿದೆ ಎಂದರು.
ಬಡವರ, ಶೋಷಿತರ, ದುರ್ಬಲರ ಏಳಿಗೆ ಮಾತ್ರವಲ್ಲದೇ ಇಡೀ ರಾಜ್ಯದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದ ರಾಜ್ಯ ಸರಕಾರ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಕಾAತರಾಜು ಹೇಳಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಪ್ರಮುಖರಾದ ಶೀಲಾ ಡಿಸೋಜ, ಯಾಕೂಬ್, ಚೇತನ್, ಲಾರೆನ್ಸ್, ಜನಾರ್ದನ್, ಸುರೇಶ್, ಅಬ್ಬಾಸ್ ಸೇರಿದಂತೆ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಇದ್ದರು. ಬಸ್ ನಿಲ್ದಾಣದಲ್ಲಿರುವ ಬಸ್ಗಳಿಗೆ ಪೂಜೆ ಸಲ್ಲಿಸಿ ಪ್ರಯಾಣಿಕರಿಗೆ ಸಿಹಿ ಹಂಚಲಾಯಿತು.
ವೀರಾಜಪೇಟೆ, ಜು. ೧೪: ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಅಡಿ ೫೦೦ ಕೋಟಿ ಮಹಿಳೆಯರು ಪ್ರಯಾಣಿಸಿದ ಸಂಭ್ರಮದ ಅಂಗವಾಗಿ ವೀರಾಜಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ವತಿಯಿಂದ ಸಂಭ್ರಮಾಚರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ಘಟಕದ ನಿರ್ವಾಹಕ ಮತ್ತು ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭ ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್ ಪಿ.ವಿ, ಕೆಎಸ್ಆರ್ಟಿ.ಸಿ ಘಟಕದ ಟಿ.ಸಿ. ಬಾಲಕೃಷ್ಣ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಉಪಾಧ್ಯಕ್ಷ ಫಸಿಹ ತಬಸುಂ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಆರ್. ಕೆ. ಅಬ್ದುಲ್ ಸಲಾಂ ಸೇರಿದಂತೆ ಇನ್ನಿತರರು ಇದ್ದರು.