ಕುಶಾಲನಗರ, ಜು. ೧೪ : ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸತ್ಯ ಶುದ್ಧ ಕಾಯಕ ಪ್ರಜ್ಞೆಯ ಹಡಪದ ಅಪ್ಪಣ್ಣ ನೂರಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು ಎಂದು ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಅವರು ಬಸವಣ್ಣನವರ ನಿಕಟವರ್ತಿಗಳಾಗಿದ್ದ ಬಗ್ಗೆ ಸವಿವರವಾಗಿ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ವಚನಗಳೊಂದಿಗೆ ವಿವರಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಧಾರ್ಮಿಕ ಪ್ರಭುತ್ವ ವಿರೋಧಿಸಿ ಧಾರ್ಮಿಕ ಸ್ವಾತಂತ್ರö್ಯವನ್ನು ಪ್ರತಿಪಾದಿಸಿದ ಹೆಗ್ಗಳಿಕೆ ಬಸವಣ್ಣನ ಆಪ್ತ ಕಾರ್ಯದರ್ಶಿ ಹಡಪದ ಅಪ್ಪಣ್ಣ ನವರದ್ದಾಗಿದೆ.
ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಮ್ಮ, ಹಡಪದ ಅಪ್ಪಣ್ಣ, ಸತ್ಯಕ್ಕ, ಮುಕ್ತಾಯಕ್ಕಾ, ಅಕ್ಕಮಹಾದೇವಿ, ನೀಲಾಂಬಿಕೆ, ಸಂಕವ್ವೆ ಮೊದಲಾದ ಶಿವಶರಣರು ಪ್ರಾಚೀನ ಋಷಿಗಳ ಸಿದ್ಧಾಂತವಾದ ದೇಹವೇ ದೇವಾಲಯ ಹಾಗೂ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಸಾರಿದ ಸತ್ಪುರುಷರು ಎಂದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ಕಾಲೇಜಿನ ಪಿಯು ಉಪನ್ಯಾಸಕ ಕೆ.ಆರ್.ರಮೇಶ್ ಹಾಗೂ ಶಿವಕುಮಾರ್ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಕೆ.ಪಿ. ಪರಮೇಶ್, ವಸತಿ ಶಾಲೆಯ ಮೇಲ್ಬಿಚಾರಕ ಪ್ರವೀಣ್ ಇದ್ದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.