ಸಿದ್ದಾಪುರ, ಜು. ೧೪: ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ರೋಗಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿದ್ದ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅರೆಕಾಡು ನಿವಾಸಿ ಕೆ. ರಘು (೨೭) ಮೃತ ದುರ್ದೈವಿ. ರಘು ಅವರು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ತಾ. ೧೧ ರಂದು ಬೆಳಗ್ಗಿನ ಜಾವ ತಿಂಡಿ ಹಾಗೂ ಕಾಫಿ ತರುವುದಾಗಿ ಹೇಳಿ ಹೋದ ರಘು ಮರಳಿ ಬಂದಿರಲಿಲ್ಲ. ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಈ ಕುರಿತು ರಘು ಪತ್ನಿ ರಾಜೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹುಡುಕಾಟ ಮುಂದುವರೆಸಿದಾಗ ತಾ. ೧೪ ರಂದು ಆಸ್ಪತ್ರೆಯ ನಿರ್ಮಾಣ ಹಂತದಲ್ಲಿರುವ ಲಿಫ್ಟ್ ನಿರ್ಮಿಸಲು ಬಿಟ್ಟಿರುವ ಜಾಗದ ಗುಂಡಿಯೊಳಗೆ ಬಿದ್ದು, ಶೇಖರಣೆಗೊಂಡಿದ್ದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.