ವೀರಾಜಪೇಟೆ, ಜು. ೧೪: ಪಟ್ಟಣದ ಪ್ರವಾಸಿ ಮಂದಿರದ ಬಳಿ ಇರುವ ಸರಕಾರಿ ವಸತಿ ಗೃಹದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಎರಡು ಮನೆಗಳಿಗೆ ಹಾನಿಯುಂಟಾಗಿದೆ.

ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರವನ್ನು ನಿರ್ವಹಣೆ ಮಾಡುತ್ತಿರುವ ಜಾನ್ಸನ್ ಮತ್ತು ದಿನೇಶ್ ಎಂಬವರು ವಾಸಿಸುವ ಸರಕಾರಿ ವಸತಿ ಗೃಹದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊಗೆ ಕಾಣಿಸಿಕೊಂಡಿದೆ, ತಕ್ಷಣ ದಿನೇಶ್ ಮನೆಯವರು ಹೊಗೆಯಾಡುತ್ತಿದ್ದ ಜಾಗಕ್ಕೆ ನೀರು ಹಾಕಿ ನಂದಿಸಲು ಪ್ರಯತ್ನಿಸಿದ್ದಾರೆ. ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಮತ್ತು ಸ್ಥಳೀಯ ನಿವಾಸಿಗಳು, ಬೆಂಕಿ ನಂದಿಸಲು ಪ್ರಯತ್ನ ಮಾಡಿದರು.

ಗೋಣಿಕೊಪ್ಪದಿಂದ ಆಗಮಿಸಿದ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಜಾನ್ಸನ್ ಅವರ ಮನೆ ಸಂಪೂರ್ಣ ಅಗ್ನಿಗೆ ಆಹುತಿಯಾಗಿದ್ದು, ದಿನೇಶ್ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಎರಡು ಮನೆಗಳಲ್ಲಿ ತುಂಬಿದ ಸಿಲಿಂಡರ್‌ಗಳಿದ್ದು ಅದನ್ನು ಹೊರ ತೆಗೆಯುವಲ್ಲಿ ವೀರಾಜಪೇಟೆ ಪೊಲೀಸರು ಯಶಸ್ವಿಯಾದರು.

ವೀರಾಜಪೇಟೆ ಪೊಲೀಸ್ ಡಿ.ವೈ.ಎಸ್.ಪಿ. ಮಹೇಶ್ ಕುಮಾರ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ಠಾಣೆ ಅಧಿಕಾರಿ ವಾಣಿಶ್ರಿ, ನಗರ ಠಾಣಾಧಿಕಾರಿ ಪ್ರಮೋದ್, ಪುರಸಭೆ ಅದ್ಯಕ್ಷರಾದ ಎಂ.ಕೆ. ದೇಚಮ್ಮ, ಉಪಾಧ್ಯಕ್ಷೆ ಫಸಿಹಾ, ಪುರಸಭೆ ಸದಸ್ಯರಾದ ರಂಜಿ ಪೂಣಚ್ಚ, ರಜನಿಕಾಂತ್, ಅಬ್ದುಲ್ ಜಲೀಲ್, ಸೇರಿದಂತೆ ಹಲವಾರು ಪೊಲೀಸ್ ಪೇದೆಗಳು ಮತ್ತು ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.