ನವೀಕರಣಗೊಂಡಿರುವ ಮಡಿಕೇರಿ ಕೋಟೆ ಆವರಣದಲ್ಲಿ ಸಾಹಿತ್ಯ ಹಬ್ಬವನ್ನು ಆಚರಿಸು ವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಲಾಷೆ ವ್ಯಕ್ತಪಡಿಸಿದರು.

ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಪಾಳು ಬಿದ್ದಿರುವ ಹಳೆ ನ್ಯಾಯಾಲಯ ಕಟ್ಟಡವನ್ನು ಕೆಡವಿ ಕೋಟೆ ಆವರಣವನ್ನು ಇನ್ನೂ ಸುಂದರವಾಗಿ ಅಭಿವೃದ್ಧಿಪಡಿಸುವಂತಾಗಬೇಕು ಎಂದರು.

ಜಿಲ್ಲೆಯಲ್ಲಿ ಹಲವೆಡೆ ಅವೈಜ್ಞಾನಿಕ ಹಾಗೂ ಪ್ರಕೃತಿ ವಿಕೋಪಕ್ಕೆ ಒಳಗಾಗುವ ಸಂಭವ ಇರುವ ಪ್ರದೇಶಗಳಲ್ಲಿ ಕಟ್ಟಡಗಳು ಹಾಗೂ ಇತರ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಉತ್ತರ ಖಾಂಡ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಭೂಕುಸಿತದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಕೊಡಗು ಆ ರೀತಿ ಆಗಬಾರದು ಎಂದು ಸಲಹೆ ನೀಡಿದರು.

ಕೊಡಗಿನ ಹಲವೆಡೆ ಗ್ಲಾಸ್ ಬ್ರಿಡ್ಜ್ಗಳು ನಿರ್ಮಾಣ ಗೊಳ್ಳುತ್ತಿದ್ದು ಈ ಬಗ್ಗೆ ಅವುಗಳ ಸುರಕ್ಷತೆ ಹಾಗೂ ಇತರ ವಿವರಗಳ ಕುರಿತು ಸರಕಾರ ಮಾರ್ಗಸೂಚಿ ನೀಡುವಂತೆ ತಾವು ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಾಗಿ ವಿವರಿಸಿದ ಜಿಲ್ಲಾಧಿಕಾರಿ, ಸರ್ಕಾರದಿಂದ ಮಾರ್ಗಸೂಚಿ ಬರುವವರೆಗೂ ಅವುಗಳು ಕಾರ್ಯನಿರ್ವಹಿಸಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ಲಾಸ್ ಬ್ರಿಡ್ಜ್ ಬೇಡ

ಪ್ರಕೃತಿ ಸೌಂದರ್ಯ ಸವಿಯಲು ಇರುವ ರಾಜಾ ಸೀಟಿನಲ್ಲಿ ಹೊಸದಾಗಿ ಗ್ಲಾಸ್ ಬ್ರಿಡ್ಜ್ ಅನ್ನು ನಿರ್ಮಿಸಲು ತೋಟಗಾರಿಕಾ ಇಲಾಖೆ ಅನುಮತಿ ನೀಡಿದ್ದು ಇದನ್ನು ರದ್ದುಪಡಿಸಬೇಕೆಂದು ಸಭೆಯಲ್ಲಿ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಪಾಲ್ಗೊಂಡಿದ್ದ ವಿಶೇಷ ಆಹ್ವಾನಿತ ಜಿ.ಚಿದ್ವಿಲಾಸ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿ ಈ ಸಂಬAಧ ಚರ್ಚಿಸುವುದಾಗಿ ಹೇಳಿದರು.

ಮೂಲತಃ ಕೊಡಗಿನವರಾಗಿ ಹೊರಗೆ ನೆಲೆಸಿರುವ ಯುವ ಜನಾಂಗ ಮತ್ತೆ ಕೊಡಗಿಗೆ ಬಂದು ನೆಲೆಸುವ ರೀತಿಯಲ್ಲಿ ವಿವಿಧ ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎಂದು ಬಯಸಿದ ಜಿಲ್ಲಾಧಿಕಾರಿಗಳು, ಇದರಿಂದ ವಯೋವೃದ್ಧ ತಂದೆ ತಾಯಿಗಳ ಬದುಕಿಗೆ ಕೂಡ ಆಸರೆ ಆಗುವುದನ್ನು ಜ್ಞಾಪಿಸಿದರು.

ಹಾರಂಗಿಯಲ್ಲಿ ಉದ್ಯಾನವನ ಆನೆ ಶಿಬಿರ ಹಾಗೂ ಇದೀಗ ಜಲ ಕ್ರೀಡೆಗಳು ಆರಂಭಗೊAಡಿದ್ದು ನಿಸರ್ಗಧಾಮಕ್ಕೆ ಪರ್ಯಾಯವಾಗಿ ಅಭಿವೃದ್ಧಿಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಪುಟಾಣಿ ರೈಲು

ಜಿ. ಚಿದ್ವಿಲಾಸ್ ಅವರು, ರಾಜಾಸೀಟಿನಲ್ಲಿ ಮಕ್ಕಳ ರೈಲು ಸ್ಥಗಿತವಾಗಿ ಹಲವು ವರ್ಷಗಳಾಗಿದ್ದು, ಈ ಬಗ್ಗೆ ತುರ್ತು ಕ್ರಮವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದರು.

ರಾಜಾಸೀಟಿನಲ್ಲಿ ‘ಮಕ್ಕಳ ಪುಟಾಣಿ ರೈಲು’ ಆರಂಭ ಸಂಬAಧ ದಕ್ಷಿಣ ವಲಯ ರೈಲ್ವೆ ವಿಭಾಗದ ಎಂಜಿನಿಯರ್‌ಗಳು ಪರಿಶೀಲಿಸಿದ್ದು, ಈ ಬಗ್ಗೆ ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರೈಲು ಬೋಗಿ ಅಳವಡಿಸುವುದು ಸೇರಿದಂತೆ ದಕ್ಷಿಣ ರೈಲ್ವೆ ವಲಯದ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ಪಡೆದಿದ್ದು, ಈ ಸಂಬAಧ ವರದಿ ಬಂದ ನಂತರ ಪುಟಾಣಿ ರೈಲು ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿದರು.

ನಗರದ ಅಜ್ಜಮಾಡ ದೇವಯ್ಯ ವೃತ್ತದ ಬಳಿ ‘ಮರ್ಕರ ಸ್ಕೆ÷್ವÃರ್’ ಅನ್ನು ಆಕರ್ಷಣೀಯಗೊಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಚಿದ್ವಿಲಾಸ್ ಸಲಹೆ ನೀಡಿದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಂತಿ ಗಣೇಶ್ ಅವರು ರಾಜಾಸೀಟು ಮುಖ್ಯ ದ್ವಾರದ ಬಳಿ ಅಂಗಡಿಗಳು ತುಂಬಾ ಇದ್ದು, ಪ್ರವಾಸಿಗರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಸಂಬAಧ ಅಗತ್ಯ ಕ್ರಮಕೈಗೊಳ್ಳುವಂತೆ ಸಲಹೆ ಮಾಡಿದರು.

ಚಿದ್ವಿಲಾಸ್ ಅವರು ಮಡಿಕೇರಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿರಿದಾದ ರಸ್ತೆಗಳು ಇರುವುದರಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನೂತನ ಕಟ್ಟಡ ನಿರ್ಮಿಸಿ ವಾಹನ ನಿಲುಗಡೆಗೆ ಅವಕಾಶ ಮಾಡಬೇಕು ಎಂಬ ಪ್ರಸ್ತಾವನೆ ಇದ್ದು, ಈ ಸಂಬAಧ ತುರ್ತಾಗಿ ಆದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇದಕ್ಕಾಗಿ ಅನುದಾನ ಮೀಸಲಿದ್ದು, ಟೆಂಡರ್ ಹಂತದಲ್ಲಿದೆ ಎಂದು ಹೇಳಿದರು.

ಆಹಾರ ಮೇಳ

ದಸರಾ ಸಂದರ್ಭದಲ್ಲಿ ‘ಆಹಾರ ಮೇಳ’ ಆಯೋಜಿಸುವಂತಾಗಬೇಕು ಎಂದು ಜಿ. ಚಿದ್ವಿಲಾಸ್ ಅವರು ಸಲಹೆ ನೀಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ದಸರೆಗೂ ಮೊದಲೇ ಆಹಾರ ಮೇಳ ಆಯೋಜಿಸುವುದು ಒಳ್ಳೆಯದು ಎಂದರು.

ದಸರಾ ಸಂದರ್ಭದಲ್ಲಿಯೂ ಸಹ ಪ್ರವಾಸೋದ್ಯಮ ಕ್ಷೇತ್ರದವರು ತೊಡಗಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂದು ಹೇಳಿದರು.

ಜಿ. ಚಿದ್ವಿಲಾಸ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೋರಿದರು.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಡಿಕೇರಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಹೇಳಿದರು. ಆಯಾ ಪಂಚಾಯಿತಿಗಳು ತೀರ್ಮಾನ ಮಾಡಬೇಕೆಂದರು.

ಪ್ರವಾಸಿ ಬಸ್

ಜಿಲ್ಲೆಯಲ್ಲಿ ಪ್ರವಾಸಿ ಬಸ್ ಸಂಚಾರಕ್ಕೆ ಅವಕಾಶ ಮಾಡುವಂತಾಗಬೇಕು. ಇದರಿಂದ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಚಿದ್ವಿಲಾಸ್ ಅವರು ಸಲಹೆ ನೀಡಿದರು.

ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಶೀಘ್ರ ಚಾಲನೆ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ತಾವರೆಕೆರೆ

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಕುಶಾಲನಗರ ಬಳಿಯ ತಾವರೆಕೆರೆ ಅಭಿವೃದ್ಧಿ ಪಡಿಸಿದ್ದಲ್ಲಿ ಇದನ್ನು ಸಹ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.

ಇರ್ಪು ಜಲಪಾತದಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಪ್ರವಾಸಿಗರ ಅನುಕೂಲಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ಮಾಡಿದರು.

ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್‌ನ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಅವರು ಮಾತನಾಡಿ, ಪ್ರವಾಸಿ ಸ್ಥಳಗಳ ಬಳಿ ಸೈನ್‌ಬೋರ್ಡ್ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಪ್ರತಿ ತಿಂಗಳು ಪ್ರವಾಸೋದ್ಯಮ ಸಂಬAಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಚಿಸಲಾಗಿದೆ ಎಂದರು.

ಹೋಂ ಸ್ಟೇ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಕರುಂಬಯ್ಯ ಅವರು ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದು, ಈ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸುವಂತಾಗಬೇಕು ಎಂದು ಕೋರಿದರು. ಪಾರ್ಕಿಂಗ್‌ಗೆ ಆರ್‌ಎಂಸಿ ಮೈದಾನವನ್ನು ಬಳಸಲು ಸಲಹೆ ನೀಡಿದರು.

ಸಕ್ಸಸ್ ಸ್ಟೋರಿ

ಜಿಲ್ಲಾಧಿಕಾರಿ ಅವರು ಮಾತನಾಡಿ ಜಿಲ್ಲೆಯಲ್ಲಿ ಹೋಂ ಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಹೋಂಸ್ಟೇ, ಹೋಟೆಲ್ ಸೇರಿದಂತೆ ಪ್ರವಾಸೋದ್ಯಮ ಸಂಬAಧಿಸಿದAತೆ ‘ಸಕ್ಸಸ್ ಸ್ಟೋರಿ’ ಪ್ರಕಟ/ಪ್ರಸಾರ ಆಗುವಂತಾಗಬೇಕು. ಇದರಿಂದ ಹೋಂಸ್ಟೇ, ರೆಸಾರ್ಟ್ಗಳ ಬಗ್ಗೆ ಹೆಚ್ಚಿನ ವಿಶ್ವಾಸ ಬರಲಿದೆ ಎಂದರು.

ದಸರಾದಲ್ಲಿ ಪ್ರವಾಸೋದ್ಯಮ ಸಂಘಟನೆಗಳು ಈ ವರ್ಷ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾದಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಬೇಕು. ಯಾವುದಾದರೂ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಜಿಲ್ಲೆಯಲ್ಲಿನ ಆಸಕ್ತರು ಕೊಡಗು ಪ್ರವಾಸೋದ್ಯಮ ಅಭಿವೃದ್ಧಿ ಸಂಬAಧ ಲಿಖಿತವಾಗಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಪ್ರವಾಸೋದ್ಯಮ ಮಾಹಿತಿ ಒಳಗೊಂಡ ಮಾರ್ಗಸೂಚಿಯನ್ನು ತಯಾರಿಸಬೇಕು. ಇಲ್ಲಿನ ಇತಿಹಾಸ, ಸಂಸ್ಕೃತಿ, ಕಲೆ ಬಗ್ಗೆ ಮಾಹಿತಿ ಇರಬೇಕು. ಕಾಫಿ ಟೇಬಲ್ ಬುಕ್‌ನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಹೋಂಸ್ಟೇ ಅಸೋಸಿಯೇಷನ್ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಅವರು ಮಾತನಾಡಿ, ರಾಜಾಸೀಟು ಬಳಿ ಕೂರ್ಗ್ ವಿಲೇಜ್ ಅನ್ನು ಇನ್ನೂ ಆರಂಭಿಸಿಲ್ಲ ಎಂದರು. ಪ್ರವಾಸಿಗರು ಸಹ ಈ ಬಗ್ಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಅಲ್ಲಿ ಸುರಕ್ಷತಾ ದೃಷ್ಟಿಯಿಂದ ಹಲವು ಕೆಲಸಗಳು ಆಗಬೇಕಿವೆ ಎಂದರು.

ಹೋಂ ಸ್ಟೇ, ರೆಸಾರ್ಟ್, ಟೂರ್ ಮತ್ತು ಟ್ರಾವೆಲ್ ಸಂಸ್ಥೆಯವರು ಇದುವರೆಗೆ ನೋಂದಣಿ ಮಾಡದಿದ್ದಲ್ಲಿ ನೋಂದಣಿ ಮಾಡಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಹಿರಿಯ ಪತ್ರಕರ್ತ ಅನಿಲ್ ಎಚ್. ಟಿ. ಮಾತನಾಡಿ. ಹೊರಜಿಲ್ಲೆಗಳಲ್ಲಿ ಕೊಡಗಿನ ಪ್ರವಾಸಿ ತಾಣಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು. ಬಾನುಲಿ ಎಫ್.ಎಂ., ಮಲ್ಟಿಫ್ಲೆಕ್ಸ್ಗಳಲ್ಲಿ ಕೊಡಗಿನ ಬಗ್ಗೆ ಪ್ರಚಾರ ಆದಾಗ ಪ್ರವಾಸಿಗರಿಗೂ ಕೊಡಗಿನ ಬಗ್ಗೆ ಅಗತ್ಯ ಮಾಹಿತಿ ದೊರಕುತ್ತದೆ ಎಂದರಲ್ಲದೆ, ರಾಜ್ಯ ಮಟ್ಟದ ಮತ್ತು ಇತರ ರಾಜ್ಯಗಳ ಪತ್ರಿಕೆಗಳಲ್ಲಿ ಕೊಡಗು ಪ್ರವಾಸದ ಬಗ್ಗೆ ಮಾಹಿತಿ ಲೇಖನ ಪ್ರಕಟ ಆಗಬೇಕು. ಈ ಮೂಲಕ ಪ್ರವಾಸಿಗರಿಗೆ ದೊಡ್ಡ ರೀತಿಯಲ್ಲಿ ಕೊಡಗಿನ ಪರಿಚಯ ಆಗಲಿದೆ ಎಂದರು.

ಎಸ್ಪಿ ಅಭಿಪ್ರಾಯ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ವಾಹನ ಪಾರ್ಕಿಂಗ್ ಸ್ಥಳವನ್ನು ಗುರುತು ಮಾಡಬೇಕು. ಹೋಟೆಲ್, ಹೋಂಸ್ಟೇ ರೆಸಾರ್ಟ್ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಪ್ರವಾಸಿಗರು ರಸ್ತೆಯಲ್ಲಿ ಬರುವುದು ಕಾಣುವ ರೀತಿ ಕ್ಯಾಮರಾ ಅಳವಡಿಸಿ ಎಂದು ಸಲಹೆ ನೀಡಿದರು. ಸಿಸಿಟಿವಿ ಫುಟೇಜ್‌ನಿಂದ ಮಾಹಿತಿ ಪಡೆಯಲು ಸಾಧ್ಯವಾಗಲಿದ್ದು, ಆ ನಿಟ್ಟಿನಲ್ಲಿ ಸಾಮೂಹಿಕ ಜವಾಬ್ದಾರಿ ಅಗತ್ಯ ಎಂದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಕಾಫಿ ತಯಾರಿಸುವ ವಿಧಾನ ಕುರಿತು ತರಬೇತಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಕಾಫಿ ಮಂಡಳಿಯ ಅಧ್ಯಕ್ಷರನ್ನು ಜಿಲ್ಲೆಗೆ ಆಹ್ವಾನಿಸಲಾಗುವುದು ಎಂದರು.

ಚಿದ್ವಿಲಾಸ್ ಅವರು ಅನಧಿಕೃತ ಹೋಂಸ್ಟೇಗಳಿಗೆ ಮಾಹಿತಿ ನೀಡಿ ನೋಂದಣಿ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಅನಧಿಕೃತ ಹೋಂ ಸ್ಟೇ ತಡೆಯಲು ಮುಂದಾಗಲಾಗಿದೆ. ಆ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳ ನೋಂದಣಿ ಹೆಚ್ಚಾಗಿದೆ ಎಂದು ಹೇಳಿದರು.

ಮಡಿಕೇರಿಯಲ್ಲಿ ಸಾಕಷ್ಟು ಜಾಗಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಇದ್ದರೂ ಜಾಗಗಳು ಸಮತಟ್ಟು ಹಾಗೂ ಪಾರ್ಕಿಂಗ್‌ಗೆ ವ್ಯವಸ್ಥಿತವಾಗಿ ಇಲ್ಲದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮರಾಜನ್ ಸಭೆಯ ಗಮನಕ್ಕೆ ತಂದರು. ರಾಜಾಸೀಟಿನಲ್ಲಿ ಪಾರ್ಕಿಂಗ್‌ಗೆ ಸೂಕ್ತ ಮಾರ್ಕಿಂಗ್ ಮಾಡುವ ಅಗತ್ಯ ಬಗ್ಗೆ ಒತ್ತಿ ಹೇಳಿದ ಎಸ್ ಪಿ ಅವರು, ಮುಂದೆ ಬೇಸಿಗೆಯಲ್ಲಿ ಮಾರ್ಕಿಂಗ್ ಮಾಡುವುದನ್ನು ಕಡ್ಡಾಯ ಮಾಡುತ್ತೇವೆ ಎಂದು ತಿಳಿಸಿದರು. ಸುದರ್ಶನ ವೃತ್ತದಿಂದ ತಿಮ್ಮಯ್ಯ ವೃತ್ತದ ರಸ್ತೆಯ ಬದಿಗಳಲ್ಲಿ ವಾಹನ ನಿಲುಗಡೆಗೆ ಜಾಗ ಸಮತಟ್ಟು ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸ್ಥಳೀಯ ಆಡಳಿತ ಮುಂದಾಗಬೇಕಿದೆ ಎಂದು ಎಸ್ ಪಿ ಅವರು ಹೇಳಿದರು.

ಪ್ರವಾಸೋದ್ಯಮ ಚಟುವಟಿಕೆ ಬಗ್ಗೆ ಮಾಹಿತಿ ನೀಡುವುದು, ಪ್ರವಾಸಿಗರ ರಕ್ಷಣೆ ಮತ್ತು ಸುರಕ್ಷತೆಗೆ ಒತ್ತು ನೀಡುವುದು, ಮೂಲಭೂತ ಸೌಕರ್ಯ ಕಲ್ಪಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.