ಮಡಿಕೇರಿ, ಜು. ೧೫: ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಜಿಲ್ಲೆಯ ಗಿರೀಶ್ ಕೊನೆಯುಸಿರೆಳೆದಿದ್ದಾರೆ.

ತಾ.೩ ರಂದು ಹೃದಯದ ಸಮಸ್ಯೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣದಿಂದ ತಾವು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮದೆನಾಡು ಗ್ರಾಮದ ಪಿ.ಪಿ ಗಿರೀಶ್(೩೯) ಇತ್ತ ತಾಯ್ನಾಡಿಗೂ ಮರಳಲಾಗದೇ, ಅಲ್ಲಿನ ಚಿಕಿತ್ಸೆ ಫಲಕಾರಿಯಾಗದೇ, ವಿದೇಶದಲ್ಲಿಯೇ ನಿಧನರಾಗಿದ್ದಾರೆ. ಮೃತ ಗಿರೀಶ್ ಪತ್ನಿ ಜಾನಕಿ ಮತ್ತು ಎರಡೂವರೆ ವರ್ಷದ ಮಗುವನ್ನು ಅಗಲಿದ್ದಾರೆ.

ಅನಾರೋಗ್ಯಕ್ಕೆ ತುತ್ತಾದ ಪತಿಯನ್ನು ತಾಯ್ನಾಡಿಗೆ ಕರೆಸಿಕೊಂಡು ಇಲ್ಲಿಯೇ ಚಿಕಿತ್ಸೆ ನೀಡಲು ಬೆಂಗಳೂರಿನಲ್ಲಿರುವ ಕೊಡಗಿನ ಮೂಲದ ಅವರ ಪತ್ನಿ ಜಾನಕಿ ಮತ್ತು ಗಿರೀಶ್ ಕುಟುಂಬ ಶತಾಯಗತಾಯ ಪ್ರಯತ್ನ ನಡೆಸಿದರೂ ತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಯಿಂದ ಕೊನೆಗೂ ಅವರನ್ನು ಕರೆಸಿಕೊಳ್ಳಲಾಗಲಿಲ್ಲö. ೩೫ ಲಕ್ಷದಿಂದ ೧.೫ ಕೋಟಿ ರೂ. ವರೆಗಿನ ಏರ್ ಆ್ಯಂಬುಲೆನ್ಸ್ ವೆಚ್ಚವನ್ನು ಭರಿಸಲು ಸಾಧ್ಯವಾಗಲಿಲ್ಲ. ಗಿರೀಶ್ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದ ಹಿನ್ನೆಲೆ ವೈದ್ಯಕೀಯ ನಿಮಯಗಳಿಗೆ ವಿರುದ್ಧವಾಗಿ ಅವರನ್ನು ಕರೆಸಿಕೊಳ್ಳಲು ಇಲ್ಲಿನ ಸರಕಾರದಿಂದ ತಾಂತ್ರಿಕ ನೆರವನ್ನಷ್ಟೇ ನೀಡಲಾಯಿತಾದರೂ ಆರ್ಥಿಕ ನೆರವು ನೀಡುವುದು ಸಾಧ್ಯವಾಗಿಲ್ಲö. ಈ ಎಲ್ಲಾ ಕಾರಣಗಳಿಂದ ಗಿರೀಶ್ ಕೊನೆಯ ಕ್ಷಣಗಳಲ್ಲಿ ಮನೆಯವರನ್ನೂ ನೋಡಲಾಗದೆ ಗಿರೀಶ್ ಇಹಲೋಕ ತ್ಯಜಿಸಿದ್ದಾರೆ.

ತಾಯ್ನಾಡಿಗೆ ಮೃತದೇಹ ತರುವ ಪ್ರಯತ್ನö

ಪತಿಯನ್ನು ಉಳಿಸಿಕೊಳ್ಳಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಇದೀಗ ಪತ್ನಿ ಜಾನಕಿ, ಗಿರೀಶ್ ಮೃತದೇಹವನ್ನು ತಾಯ್ನಾಡಿಗೆ ತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಈಗ ಮತ್ತೆ ಸಿಎಂ ಕಚೇರಿ ಮೆಟ್ಟಿಲು ಹತ್ತಿದ್ದಾರೆ. ಅದಕ್ಕೆ ಬೇಕಾದ ಪ್ರಯತ್ನಗಳು ಅಧಿಕಾರಿಗಳಿಂದ ನಡೆಯುತ್ತಿದೆ ಎಂದು ಜಾನಕಿ ಸ್ನೇಹಿತೆ ತಿಳಿಸಿದ್ದಾರೆ.