ಅಂದು ಆಗಸ್ಟ್ ೧೦ ೨೦೧೮, ಮಧ್ಯರಾತ್ರಿ ಕೊಡಗಿನಲ್ಲಿ ಎಂದೂ ಕಂಡು ಕೇಳರಿಯದಂತಹ ಭೂಕುಸಿತ, ಪ್ರವಾಹ ಎದುರಾಗಿತ್ತು, ಆದರೆ ಇದಕ್ಕೂ ಮೊದಲೇ ೨೦೧೮ರ ಜೂನ್ ತಿಂಗಳಲ್ಲಿ ಆದ ಭೂಕಂಪನದ ತೀವ್ರತೆ ೩.೭ ಇದ್ದು, ನಂತರ ಅದೇ ವರ್ಷ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಗೆ ಬರೋಬ್ಬರಿ ೩೬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂ ಕುಸಿತವಾಯಿತು. ಇದ್ದಕಿದ್ದ ಹಾಗೆ ನೂರಾರು ಮನೆಗಳು ಕಣ್ಮರೆಯಾದವು, ಸಾವಿರಾರು ಹೆಕ್ಟೇರ್ ಪ್ರಮಾಣದ ಕಾಫಿ ತೋಟ, ಹೊಲ ಗದ್ದೆಗಳು ಮುಳುಗಿದವು, ೨೦ ಜೀವಗಳು ಜಲ ಸಮಾಧಿಯಾದವು, ೪೦೫೬ ಮನೆಗಳಿಗೆ ಹಾನಿ, ೬೮ ಮನೆಗಳು ಸಂಪೂರ್ಣ ಮುಳುಗಿದವು. ನೂರಾರು ಜನರನ್ನು ಬದಲಿ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಯಿತು. ೨೦೧೯ ರಲ್ಲಿ ೨ನೇ ಮೊಣ್ಣಂಗೇರಿಯಲ್ಲಿ ಭೂ ಕುಸಿತ, ಮಡಿಕೇರಿಯಿಂದ ಸುಮಾರು ೧೪ ಕಿ.ಮೀ. ದೂರದಲ್ಲಿ ಇದ್ದ ಹಳ್ಳಿಯ ೧೯೩ ಕುಟುಂಬಗಳು ಹೇಗೋ ಪಾರಾಗುವಲ್ಲಿ ಯಶಸ್ವಿಯಾದವು. ಮತ್ತೆ ೨೫ ಜೂನ್ ೨೦೨೨ ರಲ್ಲಿ ಮತ್ತೆ ಮಡಿಕೇರಿಯ ಸುತ್ತಮುತ್ತ ಭೂಕಂಪನ. ೨೮ ಜುಲೈ ೨೦೨೩ ಮತ್ತೆ ೧೮ ಕಡೆ ಭೂಕುಸಿತ ಕೊಡಗಿನ ಗುಡ್ಡಗಾಡು ಜನರಿಗೆ ಮತ್ತೆ ಆತಂಕ ಎದುರಾಗಿತ್ತು. ೨೦೨೪ ಕೇರಳದ ವೈನಾಡ್ ಜಿಲ್ಲೆಯ ವೈತ್ರಿ ತಾಲೂಕಿನ ಪಂಜರಿಮಟ್ಟA, ಮುಂಡಕೈ, ಚೋರಲ್‌ಮಲೈ, ವೆಳ್ಳರಿಮಲೈ ಪ್ರದೇಶದಲ್ಲಿ ಭೀಕರ ಭೂಕುಸಿತ, ಸಾವಿರಾರು ಜೀವಗಳ ಹಾನಿ. ರಾಷ್ಟಿçÃಯ ವಿಪತ್ತು ತಂಡ ಹಾಗೂ ಎಂ.ಇ.ಜಿ.ಯ ನುರಿತ ಇಂಜಿನಿಯರ್‌ಗಳ ತಂಡ ಹಗಲು - ರಾತ್ರಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಸಾವು ನೋವುಗಳ ಸಂಖ್ಯೆಯನ್ನು ತಗ್ಗಿಸುವಲ್ಲಿ ಯಶಸ್ವಿಯಾದರು.

೨೦೧೮ ರ ಭೂ ಕುಸಿತಗಳ ನಂತರ “ಕೊಡಗಿಲ್ಲಿ ಭೂ ಕುಸಿತಗಳ ಕುರಿತು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ” (ಜಿ.ಎಸ್.ಐ) ವರದಿಯ ಪ್ರಕಾರ ಕೊಡಗಿನಲ್ಲಿ ಭೂ ಕುಸಿತಗಳಿಗೆ ಅತಿಯಾದ ಮಳೆ ಹಾಗೂ ಮಾನವಜನ್ಯ ಚಟುವಟಿಕೆಗಳಿಗೆ ವ್ಯಾಪಕವಾದ ಇಳಿಜಾರು ಪ್ರದೇಶಗಳ ಸಮತಟ್ಟುವಿಕೆ ಹಾಗೂ ಪರಿಸರಕ್ಕೆ ವಿರುದ್ಧವಾದ ಹೆಚ್ಚಿನ ಕೋನ ಇಳಿಜಾರು ಪ್ರದೇಶಗಳಲ್ಲಿ ಅಗಲವಾದ ರಸ್ತೆ, ಬೃಹತ್ ಕಟ್ಟಡಗಳು, ಹೆಚ್ಚು ಜನ ಸಾಂದ್ರತೆಯ ಹೊಟೇಲುಗಳ ನಿರ್ಮಾಣದಿಂದ ಇಳಿಜಾರುಗಳು ಅಸ್ತಿರವಾಗಿ ನೈಸರ್ಗಿಕ ವೈಫಲ್ಯತೆಗೆ ಕಾರಣವಾಗಿದೆ. ಭೂಮಿ ಮತ್ತು ಪರಿಸರ ಅಧ್ಯಯನಗಳಲ್ಲಿನ ಪ್ರಗತಿಗಳ ಕುರಿತಾಗಿ ಅಂತರರಾಷ್ಟಿçÃಯ ಸಮ್ಮೇಳನ (ಎಇಇಎಸ್೨೦೨೨) ೨೫/೦೨/೨೦೨೨ ರಾಯಪುರದಲ್ಲಿ ನಡೆದ ಸಭೆಯಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತಗಳು ಅನಿರೀಕ್ಷಿತ ಮಳೆಯಿಂದ ಮಾತ್ರವಲ್ಲದೆ ಅವೈಜ್ಞಾನಿಕ ಭೂ ಬಳಕೆ, ವಿವಿಧ ಮಾನವ ನಿರ್ಮಿತ ಕಾರಣಗಳಿಂದ ಕೂಡಿದೆ. ನೀರಿನ ನೈಸರ್ಗಿಕ ಹರಿವಿನ ಹರಿವನ್ನು ಅಡ್ಡಿಪಡಿಸಿ ಇದರ ವಿರುದ್ಧ ಕಟ್ಟಡಗಳು, ರಸ್ತೆಗಳ ನಿರ್ಮಾಣ ಪ್ರವಾಹ ಹಾಗೂ ಭೂಕುಸಿತಗಳಿಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ೦೧/೧೦/೨೦೨೪ ರಲ್ಲಿ “ಭೂ ಕುಸಿತಗಳು ದಕ್ಷಿಣ ಪಶ್ಷಿಮ ಘಟ್ಟಗಳ ಅವಲೋಕನ” ಎಂಬ ಲೇಖನದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಭೂ ಕುಸಿತಗಳು ಅತ್ಯಂತ ಅನಿರೀಕ್ಷಿತ ದುರಂತ ಘಟನೆಗಳಾಗಿವೆ, ಭೂ ಕುಸಿತಗಳು ಹೆಚ್ಚಾಗಿ ಮಾನವ, ಪ್ರಾಣಿ, ಕಟ್ಟಡಗಳು ಹಾಗೂ ರಸ್ತೆಗಳಿಗೆ ಹಾನಿ ಉಂಟುಮಾಡುತ್ತವೆ. ಇದು ದೇಶದ ಸಾಮಾಜಿಕ, ಆರ್ಥಿಕ ಸ್ಥಿತಿಯ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೆ. ಇವುಗಳನ್ನು ತಗ್ಗಿಸುವ ತಂತ್ರಗಳಲ್ಲಿ ಇಂತಹ ಪ್ರದೇಶಗಳಲ್ಲಿ ಪರಿಸರದ ಜೊತೆ ಮಾನವನ ಹುಚ್ಚಾಟ ನಿಲ್ಲಬೇಕಿದೆ ಎಂದು ಬರೆದಿದ್ದಾರೆ. ಇಷ್ಟೆಲ್ಲಾ ವರದಿಗಳು, ಸಾಕ್ಷಿಗಳು ಕಣ್ಣ ಮುಂದಿನ ಸಾವು ನೋವುಗಳು ನಡೆಯುತ್ತಿದ್ದರೂ ಇದು ಯಾವುದನ್ನೂ ಲೆಕ್ಕಿಸದೆ ನಮ್ಮ ಜಿಲ್ಲೆಗೆ ರೈಲು ಮಾರ್ಗ ತರುವ ದುಸ್ಸಾಹಸಕ್ಕೆ ಜನಪ್ರತಿನಿಧಿಗಳು ಮುಂದಾಗಿರುವುದು ವಿಷಾಧನಿಯ.

ಕೊಡಗಿನ ಒಟ್ಟು ಭೂ ಪ್ರದೇಶ ೪೧೦೨ ಚ.ಕಿ.ಮೀ. ಅದರಲ್ಲಿ ಅರ್ಧದಷ್ಟು ಅರಣ್ಯ ಪ್ರದೇಶ. ೧೯೭೪ ರಲ್ಲಿ - ೨೧೮೯ ಚ.ಕಿ.ಮೀ., ೧೯೯೫ ರಲ್ಲಿ-೧೯೨೦ ಚ.ಕಿ.ಮೀ., ೨೦೦೦ರಲ್ಲಿ ೧೮೪೮ ಚ.ಕಿ.ಮೀ. ೨೦೧೦ ರಲ್ಲಿ -೧೭೮೬ ಚ.ಕಿ.ಮೀ., ಅರಣ್ಯ ಪ್ರದೇಶದವಿದೆ, ಈಗ ಇದು ಇನ್ನೂ ಕಮ್ಮಿಯಾಗಿರಬಹುದು. ಇಲ್ಲಿಯ ಜನಸಂಖ್ಯೆ ಸಾಂದ್ರತೆ ೨೦೧೧ ರಲ್ಲಿ ೧೩೫ ಜನ / ಚ.ಕಿ.ಮೀ., ೨೦೦೨ರಲ್ಲಿ ೧೯೬ ಜನ ೨೦೧೧ರಲ್ಲಿ ಅಂದಾಜು ೨೧೦ ಜನ ಈಗ ಇದಕ್ಕಿಂತ ಹೆಚ್ಚಿರಬಹುದು - ಇದರ ಅರ್ಥ ಜನಸಂಖ್ಯೆ ಹೆಚ್ಚಾದಷ್ಟು ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ. ಪಶ್ಷಿಮ ಘಟ್ಟಗಳಲ್ಲಿ ಅರಣ್ಯ ಭೂಮಿಯ ಮೇಲಿನ ವ್ಯಾಪಕ ಅತಿಕ್ರಮಣ ದುರ್ಬಲ ಪರಿಸರ ವ್ಯವಸ್ಥೆಗಳಿಗೆ ಅಪಾಯ ಉಂಟು ಮಾಡುತ್ತಿದೆ. ಸರ್ಕಾರದ ಪ್ರಕಾರ ಕಠಿಣ ಕಾನೂನು ನಿಬಂಧನೆಗಳ ಹೊರತಾಗಿಯೂ ೨೦೧೪ ಮತ್ತು ೨೦೨೩ರ ನಡುವೆ ಅತಿಕ್ರಮಣದಿಂದಾಗಿ ಕೊಡಗಿನಲ್ಲಿ ಸುಮಾರು ೮ ಸಾವಿರ ಎಕರೆ ಅರಣ್ಯ ಭೂಮಿಯನ್ನು ಕಳೆದುಕೊಂಡಿದೆ. ಇವುಗಳಲ್ಲಿ ಅಕ್ರಮ ರೆಸಾರ್ಟ್ಗಳು, ಹೋಂಸ್ಟೇಗಳು ಮತ್ತು ಕಾಫಿ ತೋಟಗಳಿವೆ. ಕೆಲವು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆ ಹೆಚ್ಚಾಗಿ ಎಲ್ಲೆಂದರಲ್ಲಿ ನಾಯಿಕೊಡಗಳಂತೆ ತಲೆಎತ್ತುತ್ತಿರುವ ರೆಸಾರ್ಟ್ಗಳು, ಸಕ್ರಮವಾಗಿ ನಡೆಸುತ್ತಿರುವ ಹೋಂಸ್ಟೇಗಳ ಜೊತೆಯಲ್ಲಿ ಅಕ್ರಮ ಹೋಂಸ್ಟೇಗಳ ಪೈಪೋಟಿ!! ಇನ್ನು ಹಲವು ಕಡೆಗಳಲ್ಲಿ ಎಲ್ಲವು ಅಕ್ರಮಗಳೇ. ಒಂದು ಸಮೀಕ್ಷೆಯ ಪ್ರಕಾರ ಕೊಡಗಿನಲ್ಲಿ ಸುಮಾರು ೩೫೦೦-೩೬೦೦ ಹೋಂಸ್ಟೇಗಳಿವೆ. ೧೦೦-೧೫೦ ರೆಸಾರ್ಟ್ಗಳಿವೆ. ಇವುಗಳಲ್ಲಿ ೨೦೦-೫೦೦ ಕೊಠಡಿಗಳಿರುವಂತವು ಇದೆ. ಇದರ ಜೊತೆಯಲ್ಲಿ ಈಗ ಹೊಸದಾಗಿ ಗಾಳಿಬೀಡುವಿನಲ್ಲಿ ಸುಮಾರು ೧೦೦ ಎಕರೆ ಪ್ರದೇಶದಲ್ಲಿ ೬೦೦-೭೦೦ ಕೊಠಡಿಗಳಿರುವ ರೆಸಾರ್ಟ್ ಒಂದು ತಲೆಎತ್ತುತ್ತಿದೆ. ೨೦೧೮ ರ ದುರಂತದ ನಂತರ ಕೊಡಗಿನಲ್ಲಿ ಈ ಮೊದಲೇ ಭೂಕುಸಿತ, ಪ್ರವಾಹ ಪೀಡಿತ ಪ್ರದೇಶಗಳನ್ನು ಅತೀ ಸೂಕ್ಷö್ಮ ಪ್ರದೇಶವೆಂದು ಗುರುತಿಸಿ ಇಲ್ಲಿ ಯಾವುದೇ ರೀತಿಯ ಬೃಹತ್ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ನಿರ್ಣಯ ಇದ್ದರೂ ಸಹ ಅದು ಎಲ್ಲವೂ ಅಧಿಕಾರಿಗಳ ಎದುರಲ್ಲಿ ‘ನೀರಿನಲ್ಲಿ ಹೋಮ’!!! ಜನಪ್ರತಿನಿಧಿಗಳು ಅವರ ಜನಪ್ರಿಯತೆಗೆ ಏನು ಬೇಕೊ ಅದನ್ನೇ ಮಾಡುತ್ತಾರೆಯೇ ವಿನಹ ಜನರ ಅಭಿಪ್ರಾಯಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ೨೦೨೨ ರಲ್ಲಿ ೨೭.೨೯ ಲಕ್ಷ ಪ್ರವಾಸಿಗಾದರೆ, ೨೦೨೩ರಲ್ಲಿ ೪೩.೯೯ ಲಕ್ಷ, ೨೦೨೪ ರಲ್ಲಿ ೪೫.೭೨ ಲಕ್ಷ ಜನ ಕೊಡಗಿಗೆ ಬಂದಿದ್ದಾರೆ, ಮಡಿಕೇರಿ ತಾಲೂಕಿನಲ್ಲಿ ಪ್ರತಿ ವಾರಾಂತ್ಯದಲ್ಲಿ ಸಾವಿರಾರು ಜನ ಪ್ರವಾಸಿಗರು ಬಂದಿರುವ ದಾಖಲಾತಿಯಿದೆ. ಹೆಚ್ಚುತ್ತಿರುವ ಪ್ರವಾಸಿಗರಿಂದ ಎಲ್ಲಾ ತರಹದ ತೊಂದರೆಗಳು ಕಟ್ಟಿಟ್ಟ ಬುತ್ತಿ, ಉದಾ, ೪೩.೯೯ ಲಕ್ಷ ಜನ ಪ್ರವಾಸಿಗರು ೧-೨ ನೀರಿನ ಬಾಟಲಿ, ೨-೩ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸಿದರೆ ೮೪ ಲಕ್ಷ ಖಾಲಿ ನೀರಿನ ಬಾಟಲಿಗಳು ಹಾಗೂ ಸುಮಾರು ೮೦೦೦-೯೦೦೦ ಕೆ.ಜಿ.ಗಳಷ್ಟು ಪ್ಲಾಸ್ಟಿಕ್ ಬಳಸಿರುತ್ತಾರೆ. ಪ್ರವಾಸಿ ತಾಣಗಳಲ್ಲಿನ ಘನತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಅಲ್ಯುಮೀನಿಯಂ ಡಬ್ಬಿಗಳ ತ್ಯಾಜ್ಯಗಳಿಂದ ಜಲ ಹಾಗೂ ವಾಯು ಮಾಲಿನ್ಯ, ಇವೆಲ್ಲವೂ ನೇರವಾಗಿ ಕಾವೇರಿ ನದಿಯ ಒಡಲಿಗೆ ಸೇರುತ್ತಿದೆ.

ಈ ವರ್ಷ ಕೊಡಗು ಜಿಲ್ಲೆಯಲ್ಲಿ ೫ ತಿಂಗಳ ಅವಧಿಯಲ್ಲಿ ದುಪ್ಪಟ್ಟು ಮಳೆ ಎಂದರೆ ೭೪೨.೦೬ ಮಿ.ಮೀ. ದಾಖಲು, ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ ೩೩೫.೧೦ ಮಿ.ಮೀ. ಮಳೆಗಾಲದ ಉಳಿದ ಭಾಗಕ್ಕೆ ಕೊಡಗು ಸಜ್ಜಾಗುತ್ತಿರುವಾಗ, ಅಭಿವೃದ್ಧಿಯ ಬೇಡಿಕೆಗಳನ್ನು ಮತ್ತು ಅದರ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ನಮ್ಮ ಜಿಲ್ಲೆ ಇಂದು ಒಂದು ಕವಲುದಾರಿಯಲ್ಲಿದೆ. ಒಂದು ಕಡೆ ಕೃಷಿ ಹಾಗೂ ಪರಿಸರವನ್ನೇ ನಂಬಿ ಬದುಕುತ್ತಿರುವ ವರ್ಗ, ಇನ್ನೊಂದು ಕಡೆ ಪ್ರವಾಸೋದ್ಯಮದ ತಂಪುಗಾಳಿಗೆ ಮೈಯ್ಯೊಡ್ಡಿ ಪರಿಸರ ಹಾಳು ಮಾಡುತ್ತಿರುವ ವರ್ಗ, ಅದು ಏನೇ ಇರಲಿ ಮುಂಬರುವ ದಿನಗಳಲ್ಲಿ ಈ ಜಿಲ್ಲೆಯ ಕೆಲವೊಂದು ಪ್ರದೇಶಗಳು ಮತೊಂದು ವಿಪತ್ತನ್ನು ತಪ್ಪಿಸಬಹುದೇ? ಇಲ್ಲ ೨೦೧೮ ರ ದುರಂತ ಘಟನೆಗಳು ನಮ್ಮ ಮುಂದೆ ಬರಬಹುದೇ ಕಾದುನೋಡಬೇಕಿದೆ.

- ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.