ಶಾಲಾ ವಾಹನ ಚಾಲಕರೊಂದಿಗೆ ಸಭೆ

*ಗೋಣಿಕೊಪ್ಪ, ಜು. ೧೬: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಮತ್ತು ಖಾಸಗಿ ಶಾಲೆಯ ಬಸ್‌ಗಳು ಸಂಚಾರ ನಿಯಮ ಪಾಲನೆ ಮಾಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಕುಮಾರ್ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪೊನ್ನಂಪೇಟೆ ಠಾಣೆಯಲ್ಲಿ ನಡೆದ ಶಾಲೆ ವಾಹನಗಳ ಚಾಲಕರ ಸಭೆಯಲ್ಲಿ ಮಾತನಾಡಿದರು. ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್ಸು ಸೇರಿದಂತೆ ಇನ್ನಿತರ ವಾಹನಗಳು ಮಕ್ಕಳ ಸುರಕ್ಷತೆಯ ಬಗ್ಗೆ ಗಮನಹರಿಸಬೇಕು, ಪ್ರತಿಯೊಬ್ಬ ಚಾಲಕನು ಸಮವಸ್ತç ಧರಿಸುವುದರ ಜೊತೆಗೆ ಚಾಲನಾ ಪರವಾನಗಿ, ವಾಹನದ ದಾಖಲಾತಿಯನ್ನು, ವಿಮೆ ಸೌಲಭ್ಯವನ್ನು ಹೊಂದಿರಬೇಕು ಎಂದು ತಿಳಿಸಿದರು.

ಕನಿಷ್ಟ ವೇಗದ ಮಿತಿಯೊಳಗೆ ವಾಹನ ಚಾಲನೆ ಮಾಡುವುದು ಉತ್ತಮ, ಪಾನಮತ್ತನಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಗಮನವಿಲ್ಲದೆ ಬೇಜವಾಬ್ದಾರಿಯಿಂದ ವರ್ತಿಸಿದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಪ್ರತಿ ಚಾಲಕನು ಜಾಗೃತನಾಗಿರಬೇಕು ಎಂದು ತಿಳಿಸಿದರು.

ಶಾಲೆಯ ಬಸ್‌ಗಳು ಅಥವಾ ಖಾಸಗಿ ವಾಹನಗಳಲ್ಲಿ ಶಾಲೆಯ ವಿದ್ಯಾರ್ಥಿನಿಯರು ಪ್ರಯಾಣ ಕೈಗೊಂಡಾಗ ಅವರ ಮೇಲೆ ವಿಶೇಷ ಗಮನಹರಿಸುವುದು ಉತ್ತಮ. ಬೆಳಿಗ್ಗೆ ಮಕ್ಕಳನ್ನು ವಾಹನಗಳು ನೇರವಾಗಿ ಶಾಲೆಯ ಆವರಣದೊಳಗೆ ಬಿಡುವಂತೆಯೂ ಮತ್ತು ಸಂಜೆ ಮಕ್ಕಳನ್ನು ಬಿಡುವಾಗ ಅವರು ಮನೆ ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಶಾಲೆಯ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಸಂಚರಿಸುವಾಗ ಅನಾವಶ್ಯಕ ಸಮಸ್ಯೆ ಉಂಟುಮಾಡುವ ದ್ವಿಚಕ್ರ ವಾಹನಗಳು, ಅಥವಾ ಪಡ್ಡೆ ಹೈಕಳು ಬಸ್ಸನ್ನು ಹಿಂಬಾಲಿಸುವುದು ಅಥವಾ ಇನ್ನಿತರ ತೊಂದರೆಗಳನ್ನು ಕೊಡುತ್ತಿರುವ ಬಗ್ಗೆ ಗಮನಕ್ಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸಿಐಟಿ ಕಾಲೇಜ್, ಸಾಯಿ ಶಂಕರ್ ವಿದ್ಯಾ ಸಂಸ್ಥೆ, ಸಂತ ಥಾಮಸ್ ಸ್ಕೂಲ್, ಅಪ್ಪಚ್ಚು ಕವಿ ವಿದ್ಯಾಸಂಸ್ಥೆ, ಸಿಗ್ನೆಚರ್ ಅಕಾಡೆಮಿಯ ಬಸ್ಸಿನ ಚಾಲಕರುಗಳು ಸಭೆಯಲ್ಲಿ ಭಾಗಿಯಾಗಿದ್ದರು.