*ಗೋಣಿಕೊಪ್ಪ, ಜು. ೧೬: ಸಾರ್ವಜನಿಕ ಸಂಪರ್ಕವನ್ನು ಗಟ್ಟಿಗೊಳಿಸುವ ಉದ್ದೇಶದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಪೊನ್ನಂಪೇಟೆ ಠಾಣೆ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಯಿತು.

ಠಾಣಾಧಿಕಾರಿ ನವೀನ್. ಜಿ, ಕೃಷ್ಣ ಕಾಲೋನಿ ನಗರದ ಮನೆಗಳಿಗೆ ಭೇಟಿ ನೀಡಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಸಾರ್ವಜನಿಕರ ಜೊತೆ ನೇರ ಸಂಪರ್ಕ, ಜನಸಾಮಾನ್ಯರ ಸಮಸ್ಯೆಗಳ ಅರಿವು ಹಾಗೂ ಅವುಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಯೋಜನೆಯಾಗಿ ಪರಿಗಣಿಸಲಾಗುತ್ತಿದೆ.

ಸಾಮಾಜಿಕ ನ್ಯಾಯ, ಭದ್ರತೆ, ಮತ್ತು ಸಾರ್ವಜನಿಕ ವಿಶ್ವಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಪೊಲೀಸರು ಈ ಮೂಲಕ ಕಾರ್ಯಪ್ರವೃತ್ತರಾಗಲಿದ್ದಾರೆ.

ಮನೆ ಮನೆಗೆ ಪೊಲೀಸ್ ಎಂಬ ರಾಜ್ಯ ಸರ್ಕಾರದ ವಿನೂತನ ಪರಿಕಲ್ಪನೆಯ ಕಾರ್ಯಕ್ರಮವಾಗಿದೆ. ಪೊಲೀಸರಿಂದ ಹೆಚ್ಚಿನ ಸೇವೆ ಈ ಮೂಲಕ ಜನರೆಡೆಗೆ ತಲುಪಲಿದೆ ಎಂದು ಠಾಣಾಧಿಕಾರಿ ನವೀನ್ ಮಾಹಿತಿ ಒದಗಿಸಿದರು.

ನಂತರ ಕಾರ್ಯಕ್ರಮದ ಭಾಗವಾಗಿ ಗಸ್ತು ಪೊಲೀಸ್ ಸಿಬ್ಬಂದಿಗಳು ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿಭಾಗಗಳಲ್ಲಿ ಅಭಿಯಾನ ಕೈಗೊಂಡು, ಸೈಬರ್ ಅಪರಾಧ, ಮಾದಕ ವಸ್ತು, ಬಾಲಾಪರಾಧ, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಮನೆಯಲ್ಲಿರುವವರ ಹೆಸರು, ಮೊಬೈಲ್ ನಂಬರ್ ಪಡೆದುಕೊಳ್ಳಲಾಯಿತು.

ಪೊನ್ನಂಪೇಟೆ ಠಾಣಾಧಿಕಾರಿ ನವೀನ್ ಜಿ, ಎ.ಎಸ್.ಐ ಗಳಾದ ಸುರೇಂದ್ರ, ಕೃಷ್ಣ ಪೊಲೀಸ್ ಸಿಬ್ಬಂದಿಗಳು ಅಭಿಯಾನವನ್ನು ಮುನ್ನಡೆಸಿದರು.