ಮಡಿಕೇರಿ, ಜು. ೧೭: ಹಾರಂಗಿ ಜಲಾನಯನ ಪ್ರದೇಶದ ಹುಲುಗುಂದ ಗ್ರಾಮದ ಬಳಿ ಕಮಾನು ಸೇತುವೆ ನಿರ್ಮಾಣಕ್ಕೆ ರೂ. ೩೬.೫೦ ಕೋಟಿ ಹಾಗೂ ಹಾರಂಗಿ ಜಲಾಶಯದ ಎಡದಂಡೆ ಕಾಲುವೆಯ ವಿತರಣೆ ನಾಲೆಗಳ ಅಭಿವೃದ್ಧಿ ಸಂಬAಧ ರೂ. ೪೯.೯೦ ಕೋಟಿ ವೆಚ್ಚದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ದೊರೆತು ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಇವೆರಡು ಯೋಜನೆಗಳ ಕುರಿತು ಶಾಸಕ ಮಂತರ್ ಗೌಡ ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಈ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿದ ಶಾಸಕ ಮಂತರ್ ಗೌಡ, ಹುಲುಗುಂದದಲ್ಲಿ ಸೇತುವೆ ನಿರ್ಮಾಣದ ಅವಶ್ಯಕತೆಯಿತ್ತು. ಹೊರ ಹರಿವು ಹೆಚ್ಚಾದ ಸಂದರ್ಭ ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿ ಜನಜೀವನದ ಮೇಲೆ ಪರಿಣಾಮ ಬೀರುತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲಾಗಿತ್ತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಬೇಡಿಕೆಗೆ ಮನ್ನಣೆ ನೀಡಿ ಅನುಮೋದನೆ ನೀಡಿದ್ದಾರೆ.

ಅದೇ ರೀತಿ ಹಾರಂಗಿ ಅಣೆಕಟ್ಟು ನಿರ್ಮಾಣವಾದಾಗಲಿಂದಲೂ ಅದರ ನಿರ್ವಹಣೆಗೆ ಅನುದಾನ ಬಿಡುಗಡೆಯಾಗಿರಲಿಲ್ಲ. ೧೪ ಕಿ.ಮೀ ವ್ಯಾಪ್ತಿಯ ೧೮ ನಾಲೆಗಳ ಅಭಿವೃದ್ಧಿ ಉದ್ದೇಶಿತ ಯೋಜನೆಯಿಂದ ಸಾಧ್ಯವಾಗಲಿದೆ. ರೈತರಿಗೆ ಇದು ಪ್ರಯೋಜನವಾಗಲಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡಲಾಗುವುದು. ಸರಕಾರವೂ ಜಿಲ್ಲೆಯ ಹಿತವನ್ನು ಕಾಯುತ್ತಿದೆ ಎಂದು ಹೇಳಿದರು.