ಮಡಿಕೇರಿ, ಜು. ೧೬: ಮಡಿಕೇರಿ ತಾಲೂಕಿನ ಹಿಂದಿನ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಯೊಬ್ಬರು ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಮುಂದಿಟ್ಟು ಕೊಂಡು ಕಾನೂನು ಬಾಹಿರವಾದ ಕೆಲಸಗಳನ್ನು ನಡೆಸಿದ್ದು, ಈ ಬಗ್ಗೆ ಸರ್ಕಾರ ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ಮೂಲಕ ಸಮಗ್ರ ತನಿಖೆ ನಡೆಸಬೇಕೆಂದು ಕೊಡಗು ಏಕೀಕರಣ ರಂಗ ಒತ್ತಾಯಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಏಕೀಕರಣ ರಂಗದ ಖಜಾಂಚಿ ಎಂ.ಕೆ. ಅಪ್ಪಚ್ಚು ಅವರು, ಹಿಂದೆ ಮಡಿಕೇರಿಯಲ್ಲಿ ತಹಶೀಲ್ದಾರ್ ಆಗಿದ್ದ ವ್ಯಕ್ತಿ ಭೂ ದಾಖಲೆಗಳಿಗೆ ಸಂಬAಧಿಸಿದAತೆ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸಿದ್ದು, ಇದೀಗ ಕೊಡಗು ಜಿಲ್ಲಾ ಉಪ ವಿಭಾಗಾಧಿಕಾರಿಗಳಾಗಿ ಬರಲು ಪ್ರಯತ್ನಿಸುತ್ತಿದ್ದಾರೆ.
ಒಂದು ವೇಳೆ ಅವರು ಕಂದಾಯ ಇಲಾಖೆಯ ಪ್ರಮುಖ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದ ಉಪ ವಿಭಾಗಾಧಿಕಾರಿಯಾಗಿ ಜಿಲ್ಲೆಗೆ ಬಂದರೆ ಕಂದಾಯ ಇಲಾಖೆಯ ಕೆಲಸ ಕಾರ್ಯಗಳು ಹದಗೆಡಲಿದ್ದು ಸಾರ್ವಜನಿಕರು ತೊಂದರೆಗೊಳಗಾಗ ಬೇಕಾಗುತ್ತದೆ ಎಂದರು.
ಈ ಸಂಬAಧ ಈಗಾಗಲೇ ಜಿಲ್ಲೆಯ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಅವರುಗಳಿಗೆ ಆ ಅಧಿಕಾರಿ ಅವಧಿಯಲ್ಲಿ ನಡೆದಿರುವ ಕೆಲ ಅಕ್ರಮಗಳ ಬಗ್ಗೆ ಮಾಹಿತಿಯನ್ನು ದಾಖಲೆ ಸಹಿತ ನೀಡಲಾಗಿದೆ. ಇದನ್ನು ಪರಿಶೀಲಿಸಿ ಯಾವುದೇ ಕಾರಣಕ್ಕೂ ಅವರನ್ನು ಜಿಲ್ಲೆಯ ಉಪವಿಭಾಗಾಧಿಕಾರಿ ಸ್ಥಾನಕ್ಕೆ ನಿಯುಕ್ತಿ ಮಾಡಬಾರದು ಎಂದು ಆಗ್ರಹಿಸಿದರು. ಕಂದಾಯ ಸಚಿವರಿಗೂ ದೂರು ನೀಡಲಾಗಿದೆ ಎಂದು ತಿಳಿಸಿದರು.
ಹಿಂದಿನ ತಹಶೀಲ್ದಾರ್ ತಮ್ಮ ಅಧಿಕಾರದ ಅವಧಿಯಲ್ಲಿ, ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ಅಕ್ರಮ ಸಕ್ರಮದಡಿ ಪಿ.ವಿ. ದಿನೇಶ್ ಕುಮಾರ್ ಎಂಬವರಿಗೆ ಮಂಜೂರಾದ ಜಾಗವನ್ನು ತಹಶೀಲ್ದಾರ್ ಅವರ ತಾಯಿ ಹೆಸರಿನಲ್ಲಿ ಖರೀದಿಸುತ್ತಾರೆ.
ಆದರೆ, ಕರಾರು ಪತ್ರದಲ್ಲಿ ಜಾಗಕ್ಕೆ ರೂ. ೫ ಲಕ್ಷ ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ ಎಂದು ನಮೂದಿಸಲಾಗಿದೆ ಹೊರತು ಹಣದ ವ್ಯವಹಾರ ಬ್ಯಾಂಕ್ ಮೂಲಕ ನಡೆದಿರುವ ದಾಖಲೆಗಳನ್ನು ನೀಡಿಲ್ಲ. ಇದರೊಂದಿಗೆ ಖರೀದಿಸಿದ ಈ ಜಾಗವನ್ನು ತಹಶೀಲ್ದಾರ್ ಅವರ ಮಕ್ಕಳಿಗೆ ಗಿಫ್ಟ್ ಡೀಡ್ ಮೂಲಕ ವರ್ಗಾಯಿಸಲಾಗಿದೆ ಎಂದು ದೂರಿದರು.
ಮತ್ತೊಂದು ಪ್ರಕರಣದಲ್ಲಿ ಮಾಚಯ್ಯ ಎಂಬವರು ಆವಂಡಿ ಗ್ರಾಮದಲ್ಲಿ ಒಂದು ಎಕರೆ ಜಾಗವನ್ನು ಶುದ್ಧ ಕ್ರಯಕ್ಕೆ ಖರೀದಿಸಿದ್ದಾರೆ. ಇದರ ಮೌಲ್ಯ ರೂ. ೫,೨೫,೦೦೦ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆಯಾದರೂ ಆ ಮೊತ್ತವನ್ನು ಮಾಚಯ್ಯ ಅವರು ಪಾವತಿಸಿರುವ ಮಾಹಿತಿಯನ್ನು ಕ್ರಯ ಪತ್ರದಲ್ಲಿ ನಮೂದಿಸಿಲ್ಲ ಎಂದ ಅಪ್ಪಚ್ಚು ಅವರು, ಮಾಚಯ್ಯ ಈ ಹಿಂದೆ ಮಡಿಕೇರಿ ತಾಲೂಕು ಕಚೇರಿಯಲ್ಲಿ ಗ್ರಾಮಲೆಕ್ಕಿಗರಾಗಿದ್ದ ವ್ಯಕ್ತಿಯ ಪತ್ನಿಯ ತಂದೆಯಾಗಿದ್ದಾರೆ ಎಂದು ಮಾಹಿತಿಯಿತ್ತರು.
ಇನ್ನೊಂದು ಪ್ರಕರಣದಲ್ಲಿ ಶರತ್ ಎಂಬವರು ಆವಂಡಿ ಗ್ರಾಮದಲ್ಲಿ ೦.೫೦ ಎಕರೆ ಜಮೀನನ್ನು ಶುದ್ಧ ಕ್ರಯಕ್ಕೆ ಖರೀದಿಸಿದ್ದಾರೆ. ಅದರ ಮೌಲ್ಯ ೨,೬೨,೫೦೦ ಎಂದು ಕ್ರಯ ಪತ್ರದಲ್ಲಿ ನಮೂದಿಸಿದ್ದು, ಆ ಮೊತ್ತವನ್ನು ಪಾವತಿಸಿರುವ ಬಗ್ಗೆ ನಮೂದಾಗಿಲ್ಲ. ಶರತ್ ಅಧಿಕಾರಿಯ ಪುತ್ರರಾಗಿದ್ದಾರೆ ಎಂದು ಅಪ್ಪಚ್ಚು ತಿಳಿಸಿದರು. ಮತ್ತೋರ್ವ ಪುತ್ರ ಹೇಮಂತ್ ಎಂಬವರು ಆವಂಡಿ ಗ್ರಾಮದಲ್ಲಿ ೦.೫೦ ಎಕರೆ ಜಾಗ ಖರೀದಿಸಿದ್ದು ಇದರ ಮೌಲ್ಯ ೨,೬೨,೫೦೦ ಎಂದು ಕ್ರಯಪತ್ರದಲ್ಲಿ ನಮೂದಾಗಿದ್ದು ಹಣ ಪಾವತಿಸಿದ ಮಾಹಿತಿಯನ್ನು ನಮೂದಿಸಿಲ್ಲ ಎಂದು ಅವರು ಆಪಾದಿಸಿದರು. ಕಂದಾಯಕ್ಕೆ ಬಾರದ ಜಾಗದಲ್ಲಿ ಕಾಫಿ ಕೃಷಿ ಇದೆಯೆಂದು ಕಂದಾಯ ನಿಗದಿಪಡಿಸಿ, ಹಿಂದಿನ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿ ದಾಖಲೆಗಳನ್ನು ಸೃಷ್ಟಿಸಿ ಇದಕ್ಕೆ ಪ್ರತಿಯಾಗಿ ಆ ಜಮೀನಿನ ಭಾಗವನ್ನೇ ತಮ್ಮ ಕುಟುಂಬದವರ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ಅಪ್ಪಚ್ಚು ಆರೋಪ ಮಾಡಿದರು.
ಕೊಡಗು ಏಕೀಕರಣ ರಂಗದ ಕಾರ್ಯದರ್ಶಿ ಟಿ.ಎಂ. ಸೋಮಯ್ಯ ಮಾತನಾಡಿ, ಜಿಲ್ಲೆಯಲ್ಲಿ ಈ ರೀತಿ ಕಂದಾಯ ಅಧಿಕಾರಿಗಳು ನಡೆಸಿರುವ ಅಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸಂಘಟನೆಯಿAದ ಮಾತ್ರ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ತೊಂದರೆಗೆ ಸಿಲುಕಿದವರು ಅಗತ್ಯ ಮಾಹಿತಿಯನ್ನು ಕೊಡಗು ಏಕೀಕರಣ ರಂಗಕ್ಕೆ ಒದಗಿಸುವಂತೆ ಕೋರಿದರು.
ಗೋಷ್ಠಿಯಲ್ಲಿ ಕೊಡಗು ಏಕೀಕರಣ ರಂಗದ ಸದಸ್ಯ ತಮ್ಮು ಪೂವಯ್ಯ ಉಪಸ್ಥಿತರಿದ್ದರು.