ಸೋಮವಾರಪೇಟೆ, ಜು. ೧೮: ಪ್ರಸಕ್ತ ಸಾಲಿನಲ್ಲಿ ಈವರೆಗೆ ಸುರಿದ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು ೬೨ ಮನೆಗಳಿಗೆ ಹಾನಿಯಾಗಿದ್ದು, ೮ ಜಾನುವಾರುಗಳು ಸಾವನ್ನಪ್ಪಿವೆ. ಇದರೊಂದಿಗೆ ೨ ಪ್ರಕರಣಗಳಲ್ಲಿ ಕೊಟ್ಟಿಗೆ ಹಾನಿಯಾಗಿದ್ದು, ಒಟ್ಟಾರೆಯಾಗಿ ಸರ್ಕಾರದಿಂದ ರೂ. ೨೨,೮೨,೩೦೦ ಪರಿಹಾರ ವಿತರಣೆ ಮಾಡಲಾಗಿದೆ.

ತಾಲೂಕು ತಹಶೀಲ್ದಾರ್, ಕಂದಾಯ ಇಲಾಖೆ, ಲೋಕೋಪಯೋಗಿ, ಪಶುವೈದ್ಯಕೀಯ ಇಲಾಖೆಗಳ ಜಂಟಿ ಸಮೀಕ್ಷೆ, ವರದಿಯನ್ನಾಧರಿಸಿ ತ್ವರಿತವಾಗಿ ಪರಿಹಾರ ವಿತರಣೆ ಮಾಡಲಾಗಿದೆ. ತಹಶೀಲ್ದಾರ್ ಕೃಷ್ಣಮೂರ್ತಿ ಅವರು ಎನ್‌ಡಿಆರ್‌ಎಫ್ ನಿಯಮಾನುಸಾರ ತುರ್ತು ಪರಿಹಾರ ವಿತರಣೆಗೆ ಕ್ರಮವಹಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ೬೦ ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ ಶೇ. ೧೫ಕ್ಕಿಂತ ಕಡಿಮೆ ಹಾನಿಯಾದ ೮ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ೫೨ ಮನೆಗಳ ಮಾಲೀಕರಿಗೆ ಈಗಾಗಲೇ ಪರಿಹಾರದ ಮೊತ್ತ ಜಮೆಯಾಗಿದೆ.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಶೇ. ೧೫ಕ್ಕಿಂತ ಕಡಿಮೆ ಹಾನಿಯಾದ ಮನೆಗಳ ಸಂಖ್ಯೆ ೮. ಶೇ. ೧೫ ರಿಂದ ೨೦ವರೆಗೆ ಹಾನಿಯಾದ ೧೧ ಮನೆಗಳಿಗೆ ತಲಾ ೬,೫೦೦ರಂತೆ ಪರಿಹಾರ ನೀಡಲಾಗಿದೆ. ೨೦ ರಿಂದ ೫೦ರಷ್ಟು ಹಾನಿಯಾದ ೧೬ ಪ್ರಕರಣಗಳಲ್ಲಿ ತಲಾ ೩೦ ಸಾವಿರ,

(ಮೊದಲ ಪುಟದಿಂದ) ಶೇ.೫೦ ರಿಂದ ೭೫ರಷ್ಟು ಹಾನಿಯಾದ ೧೮ ಪ್ರಕರಣಗಳಲ್ಲಿ ತಲಾ ೫೦ ಸಾವಿರ, ಶೇ. ೭೫ಕ್ಕಿಂತ ಹೆಚ್ಚು ಹಾನಿಯಾದ ೭ ಪ್ರಕರಣದಲ್ಲಿ ರೂ. ೧.೨೦ ಲಕ್ಷ ಪರಿಹಾರವನ್ನು ಮನೆಯ ಮಾಲೀಕರ ಖಾತೆಗೆ ಜಮೆ ಮಾಡಲಾಗಿದೆ.

ಪಟ್ಟಣ ವ್ಯಾಪ್ತಿಯಲ್ಲಿ ಶೇ. ೧೫ ರಿಂದ ೨೦ರಷ್ಟು ಹಾನಿಯಾದ ೧ ಪ್ರಕರಣದಲ್ಲಿ ೬,೫೦೦ ರೂಪಾಯಿ, ಶೇ. ೭೫ಕ್ಕಿಂತ ಅಧಿಕ ಹಾನಿಯಾದ ಮತ್ತೊಂದು ಪ್ರಕರಣದಲ್ಲಿ ೧.೨೦ ಲಕ್ಷ ಹಣವನ್ನು ಪರಿಹಾರ ರೂಪದಲ್ಲಿ ವಿತರಿಸಲಾಗಿದೆ.

೮ ಮನೆಗಳು ಶೇ. ೧೫ಕ್ಕಿಂತ ಕಡಿಮೆ ಹಾನಿಯಾಗಿರುವ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಣೆ ಸಾಧ್ಯವಿಲ್ಲ. ಹೀಗಾಗಿ ೮ ಮನೆಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಈಗಾಗಲೇ ೫೪ ಮನೆಗಳಿಗೆ ಘಟನೋತ್ತರ ಅನುಮೋದನೆ ಪಡೆದು ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದ್ದು, ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಲಾಗಿದೆ.

ಇನ್ನು ತಾಲೂಕಿನಲ್ಲಿ ೮ ಜಾನುವಾರುಗಳು ಅತೀ ಶೀತ, ವಿದ್ಯುತ್ ಅವಘಡದಿಂದ ಸಾವಿಗೀಡಾಗಿವೆ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿಯೇ ೭ ಜಾನುವಾರುಗಳು ಸಾವನ್ನಪ್ಪಿವೆ. ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೧ ಜಾನುವಾರು ಸಾವಿಗೀಡಾಗಿದೆ. ಪಶು ವೈದ್ಯಕೀಯ ಇಲಾಖೆಯ ವರದಿ ಅನುಸಾರ ೮ ಜಾನುವಾರುಗಳ ಮಾಲೀಕರಿಗೆ ಒಟ್ಟಾರೆಯಾಗಿ ೨,೬೭,೫೦೦ ರೂಪಾಯಿ ಪರಿಹಾರ ವಿತರಣೆ ಮಾಡಲಾಗಿದೆ.

ಕಿರಗಂದೂರು ಹಾಗೂ ಸೂರ್ಲಬ್ಬಿ ಗ್ರಾಮದಲ್ಲಿ ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿಯಾಗಿದ್ದು, ಎರಡೂ ಪ್ರಕರಣದಲ್ಲಿ ತಲಾ ೩ ಸಾವಿರದಂತೆ ಒಟ್ಟು ೬ ಸಾವಿರ ಪರಿಹಾರ ವಿತರಣೆ ಮಾಡಲಾಗಿದೆ. - ವಿಜಯ್