ಸಿದ್ದಾಪುರ, ಜು. ೧೮: ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ ಬಾಡಗ ಬಾಣಂಗಾಲ, ಮೇಕೂರು-ಹೊಸ್ಕೇರಿ, ಚೆನ್ನಯ್ಯನಕೋಟೆ ಭಾಗದಲ್ಲಿ ಕಾಡಾನೆ ಕಾರ್ಯಾಚರಣೆ ನಡೆಯಿತು. ಈ ವೇಳೆ ಆರು ಆನೆಗಳನ್ನು ಕಾಡಿಗಟ್ಟುವಲ್ಲಿ ಕಾರ್ಯಾಚರಣೆ ತಂಡ ಯಶಸ್ವಿಯಾಯಿತು.

ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಸಮಸ್ಯೆ ಉಂಟಾಗಿರುವ ಹಿನ್ನೆಲೆ ಶಾಸಕ ಪೊನ್ನಣ್ಣ ಅವರ ಸೂಚನೆ ಮೇರೆ ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮತ್ತು ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಡಾನೆಗಳ ಗುಂಪು ಎರಡು ಭಾಗವಾಗಿ ಬೇರ್ಪಟ್ಟು ಒಂದು ಗುಂಪಿನಲ್ಲಿ ಎರಡು ಮರಿಯಾನೆಗಳು ಸೇರಿದಂತೆ ಆರು ಕಾಡಾನೆಗಳನ್ನು ಮೊಳಗುಮನೆ ಕಾಫಿ ತೋಟದ ಮೂಲಕ ದೇವಮಚ್ಚಿ ಅರಣ್ಯಕ್ಕೆ ಅಟ್ಟಲಾಯಿತು.

ಮಳೆಯ ನಡುವೆ ತಂಡವು ಕಾರ್ಯಾಚರಣೆ ನಡೆಸುವ ಸಂದರ್ಭ ೪ ಮರಿಯಾನೆಗಳು ಸೇರಿದಂತೆ ೧೦ ಕಾಡಾನೆಗಳು ಕಂಡುಬAದವು. ಇವುಗಳನ್ನು ಕಾಡಿಗೆ ಓಡಿಸಲು ಹರಸಾಹಸಪಟ್ಟರು ಕೂಡ ಕಾಡಾನೆಗಳು ಕಾಡಿನತ್ತ ತೆರಳದೆ ಬಾಡಗ ಬಾಣಂಗಾಲ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಉಳಿದುಕೊಂಡವು. ಈ ಸಂದರ್ಭ ಮರಿಯಾನೆಗಳೊಂದಿಗೆ ಇದ್ದ ಕಾಡಾನೆಗಳು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಘಟನೆಯು ನಡೆಯಿತು. ಆದರೂ ಛಲಬಿಡದ ತಂಡ ಸಂಜೆವರೆಗೂ ಕಾರ್ಯಾಚರಣೆ ನಡೆಸಿತು.

ಕಾರ್ಯಾಚರಣೆಯಲ್ಲಿ ತಿತಿಮತಿ ಉಪವಲಯ ಅರಣ್ಯ ಅಧಿಕಾರಿ ಶಶಿ, ಅರಣ್ಯ ರಕ್ಷಕ ರಾಜೇಶ್, ವನ್ಯಜೀವಿ ಅರಣ್ಯ ವಿಭಾಗದ ಸಿಬ್ಬಂದಿಗಳು ದೇವಮಚ್ಚಿ ವಲಯದ ಸಿಬ್ಬಂದಿಗಳು ಆರ್.ಆರ್.ಟಿ. ತಂಡದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. -ವರದಿ : ವಾಸು