ಸೋಮವಾರಪೇಟೆ,ಜು.೧೮: ಇಲ್ಲಿನ ಮಹದೇಶ್ವರ ಬಡಾವಣೆಯಲ್ಲಿ ಸ್ಥಳೀಯರು ಗೌರಿ ಗಣೇಶೋತ್ಸವ ಆಚರಣೆ ಸಂಬAಧ ನಿರ್ಮಿಸಿರುವ ತಾತ್ಕಾಲಿಕ ಶೆಡ್‌ನ್ನು ಹಾಗೆಯೇ ಮುಂದುವರೆಸಲು ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದು, ಸ್ಥಳೀಯರು ಸಮುದಾಯದ ಉಪಯೋಗಕ್ಕಾಗಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಆ ಜಾಗ ಕಲ್ಲು ಬಂಡೆ ಪ್ರದೇಶವಾಗಿದ್ದು, ವಸತಿ ನಿರ್ಮಾಣಕ್ಕೆ ಅಯೋಗ್ಯವಾಗಿದೆ. ಈ ಹಿನ್ನೆಲೆ ಯಥಾ ಸ್ಥಿತಿ ಕಾಪಾಡಿಕೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆಯಲ್ಲಿ ಸ್ಥಳೀಯರು ವಾರ್ಷಿಕ ಗೌರಿ ಗಣಪತಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದ ಸ್ಥಳದಲ್ಲಿ ಕಳೆದ ಐದು ದಿನಗಳ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಈ ಬಗ್ಗೆ ಪಂಚಾಯಿತಿ ಮುಖ್ಯಾಧಿಕಾರಿ ಗಳು ಸ್ಥಳ ಪರಿಶೀಲನೆ ನಡೆಸಿ ಶೆಡ್ ತೆರವಿಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ನಂತರ ಸಾರ್ವಜನಿಕರು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು.

ಇದೀಗ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈಗಿರುವ ಶೆಡ್‌ನ್ನು ಹಾಗೆಯೇ ಮುಂದುವರೆಸುವುದು, ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಕ್ರಮ ವಹಿಸುವ ಬಗ್ಗೆ ತೀರ್ಮಾನಿಸಲಾಗಿದೆ.

ಇದರೊಂದಿಗೆ ೧೫ ಮಂದಿ ಪೌರ ಕಾರ್ಮಿಕರಿಗೆ ನಿವೇಶನ ಹಂಚುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಮೃತ್-೨ ಯೋಜನೆಯಡಿ ನೀರಿನ ಸಂಪರ್ಕಕ್ಕಾಗಿ ಪಟ್ಟಣದ ರಸ್ತೆಗಳನ್ನು ಅಗೆದಿದ್ದು, ತಕ್ಷಣ ಗುಂಡಿಗಳನ್ನು ಮುಚ್ಚುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಅವರಿಗೆ ಸೂಚನೆ ನೀಡಲಾಗಿದೆ.

ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರುಗಳಾದ ಮೃತ್ಯುಂಜಯ, ಶುಭಕರ್, ಚಂದ್ರು, ಶೀಲಾ ಡಿಸೋಜ, ಸಂಜೀವ, ಜೀವನ್, ನಾಗರತ್ನ, ನಾಗರಾಜ್, ಮುಖ್ಯಾಧಿಕಾರಿ ಸತೀಶ್ ಉಪಸ್ಥಿತರಿದ್ದರು.