*ಗೋಣಿಕೊಪ್ಪ, ಜು. ೧೯: ಬೆಸಗೂರು ರಸ್ತೆಯ ಡಾಂಬರು ಕಿತ್ತುಹೋಗಿ ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಇಲ್ಲಿ ವಾಹನ ಸವಾರಿ ದುಸ್ಸಾಹಸವೇ ಸರಿ. ಈ ಬಾರಿಯ ತೀವ್ರ ಮಳೆಗೆ ರಸ್ತೆಯ ಡಾಂಬರು ಕಿತ್ತು ಹೋಗಿದೆ. ಕಳೆದ ಬೇಸಿಗೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲು ಶಾಸಕರು ಈ ಮಾರ್ಗದಲ್ಲಿ ಸಂಚರಿಸುವಾಗ ರಸ್ತೆ ಹಾಳಾಗಿರುವ ವಿಚಾರ ಗಮನಕ್ಕೆ ಬಂದು ರಸ್ತೆ ಡಾಂಬರಿಕರಣಕ್ಕೆ ಇಂಜಿನಿಯರ್‌ಗಳಿಗೆ ಸೂಚಿಸಿದ್ದರು.
ಎರಡು ತಿಂಗಳು ಕಳೆಯುವ ಮೊದಲೇ ಡಾಂಬರು ಕಿತ್ತು ಹೋಗಿದೆ. ಕಳಪೆ ಕಾಮಗಾರಿ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ರಸ್ತೆಯಗಲ ತುಂಬಾ ಹೊಂಡ ಬಿದ್ದು ಮಳೆನೀರು ನಿಂತು ರಸ್ತೆ ಸಂಚಾರಕ್ಕೆ ತೂಡಕುಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಇದೀಗ ಆಟೋಗಳು ಸಂಚಾರ ಮಾಡುತ್ತಿಲ್ಲ. ಶಾಲಾ ಬಸ್ ಸಂಚಾರ ಅಸಾಧ್ಯ. ವಿದ್ಯಾರ್ಥಿಗಳಿಗೆ ಈ ಮಾರ್ಗ ಸಂಕಷ್ಟ. ವಯಸ್ಕರು, ರೋಗಿಗಳು, ಗರ್ಭಿಣಿಯರಿಗೆ ಈ ರಸ್ತೆ ಶಾಪವಾಗಿ ಪರಿಣಮಿಸಿದೆ. ಮುಂದಾದರೂ ಈ ರಸ್ತೆಯನ್ನು ದುರಸ್ತಿ ಮಾಡುವ ಮೂಲಕ ಈ ಜನರ ಸಂಚಾರ ಸಂಕಷ್ಟವನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂಬುವುದು ಒತ್ತಾಯವಾಗಿದೆ.