(ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೧೯: ರಾಜ್ಯದಲ್ಲಿ ಗಮನ ಸೆಳೆದಿದ್ದ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ನುರಿತ ಅನುಭವಿ ವೈದ್ಯರುಗಳು ವರ್ಗಾವಣೆಗೊಳ್ಳುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ. ಇದರಿಂದಾಗಿ ಹೊರ ಹಾಗೂ ಒಳರೋಗಿಗಳಿಗೆ ಸಮಸ್ಯೆ ಉಂಟಾಗಿದೆ.

ದ.ಕೊಡಗಿನ ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಆಸ್ಪತ್ರೆಯನ್ನು ಕುಟ್ಟ, ಬಾಳೆಲೆ, ತಿತಿಮತಿ, ಪೊನ್ನಂಪೇಟೆ ಸೇರಿದಂತೆ ಸುತ್ತಮುತ್ತಲಿನ ಜನತೆ ಅವಲಂಭಿಸಿದ್ದಾರೆ. ಯಾವುದೇ ಅಪಘಾತ ಹಾಗೂ ಇನ್ನಿತರ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಗೋಣಿಕೊಪ್ಪ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಾರೆ.

ಲಭ್ಯವಿದ್ದ ವೈದ್ಯರುಗಳಾದ ಡಾ. ಸುರೇಶ್ ಹಾಗೂ ಡಾ. ಗ್ರೀಷ್ಮಾ ಬೋಜಮ್ಮ ಆಸ್ಪತ್ರೆಯ ನಿರ್ವಹಣೆ ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದರು. ಇದೀಗ ಹೊಸ ನಿಯಮದ ಅನ್ವಯ ಗೋಣಿಕೊಪ್ಪ, ಸಿದ್ದಾಪುರ

ಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರನ್ನು ವರ್ಗಾವಣೆಗೊಳಿಸುತ್ತಿದ್ದಂತೆಯೇ, ಖಾಲಿ ಇರುವ ವೈದ್ಯರ ಹುದ್ದೆಗೆ ಹೊರ ಜಿಲ್ಲೆಯಿಂದ ಯಾರೂ ಕೂಡ ಆಗಮಿಸದ ಹಿನ್ನೆಲೆಯಲ್ಲಿ ಸಮಸ್ಯೆ ಉಲ್ಬಣವಾಗಿದೆ.

(ಮೊದಲ ಪುಟದಿಂದ) ಹೊಸ ನಿಯಮದ ಅನ್ವಯ ಜಿಲ್ಲಾಮಟ್ಟದ ವೈದ್ಯಾಧಿಕಾರಿಗಳು ಜಿಲ್ಲೆಯ ವಿವಿಧ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯ ವೈದ್ಯರುಗಳನ್ನು ಅಗತ್ಯಕ್ಕೆ ತಕ್ಕಂತೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ನಿಯೋಜನೆ ಮಾಡುವ ಅಧಿಕಾರವನ್ನು ಕೂಡ ಮೊಟಕುಗೊಳಿಸಲಾಗಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಆದೇಶವಿಲ್ಲದೆ ಯಾವ ಕೆಲಸವನ್ನು ಮಾಡದಿರಲು ಸ್ಪಷ್ಟ ಸೂಚನೆಯನ್ನು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೀಡಲಾಗಿದೆ.

ಗೋಣಿಕೊಪ್ಪ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ೫೦ ಹಾಸಿಗೆಯ ಆಸ್ಪತ್ರೆಯನ್ನಾಗಿಸಲು ಶಾಸಕ ಪೊನ್ನಣ್ಣ ಈಗಾಗಲೇ ಸರ್ಕಾರದ ವತಿಯಿಂದ ಆದೇಶ ಜಾರಿಗೊಳಿಸಿದ್ದಾರೆ. ಹುದಿಕೇರಿಯಲ್ಲಿರುವ ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿAದ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಲು ಅನುದಾನ ಬಿಡುಗಡೆಗೊಳಿಸಿದ್ದಾರೆ. ಇದೀಗ ರಾಜ್ಯ ಪ್ರಧಾನ ಕಾರ್ಯದರ್ಶಿಗಳ ಆದೇಶದಿಂದಾಗಿ, ಲಭ್ಯವಿದ್ದ ವೈದ್ಯರು ಕೂಡ ವರ್ಗಾವಣೆಗೊಂಡಿರುವುದರಿAದ ಹೊಸ ಸಮಸ್ಯೆಗೆ ಕಾರಣವಾಗಿದೆ. ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಸಾರ್ವಜನಿಕರು ಈ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಲು ಮುಂದಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯವರಿಂದ ವಿಶೇಷ ಅನುಮತಿಯನ್ನು ಕೊಡಗು ಜಿಲ್ಲೆಯ ಡಿಹೆಚ್‌ಓ ಅವರು ಪಡೆಯುವ ಮೂಲಕ ರಾಜ್ಯ ಪ್ರದಾನ ಕಾರ್ಯದರ್ಶಿಗಳಿಂದಲೇ ಈಗಾಗಲೇ ಗೋಣಿಕೊಪ್ಪ ಹಾಗೂ ಸಿದ್ದಾಪುರದಿಂದ ವರ್ಗಾವಣೆಗೊಂಡಿರುವ ವೈದ್ಯರನ್ನು ಇದೇ ಆಸ್ಪತ್ರೆಗೆ ನಿಯೋಜನಗೊಳಿಸಿದಲ್ಲಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದು. ತಪ್ಪಿದ್ದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

ಸಚಿವರ ಗಮನ ಸೆಳೆದಿದ್ದ ಶಾಸಕ

ಗೋಣಿಕೊಪ್ಪ ಹಾಗೂ ಸಿದ್ದಾಪುರ ನಗರಗಳಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರಂತರವಾಗಿ ದಿನದ ೨೪ ಗಂಟೆ ಜನತೆಗೆ ಲಭ್ಯವಿದ್ದ ವೈದ್ಯರುಗಳಿಂದ ವೈದ್ಯಕೀಯ ಸೌಲಭ್ಯ ಲಭಿಸುತ್ತಿತ್ತು. ಇದರಿಂದ ರೋಗಿಗಳು ಈ ಆಸ್ಪತ್ರೆಗಳನ್ನು ಹೆಚ್ಚಾಗಿ ಅವಲಂಭಿಸಿದ್ದರು. ನೂತನ ನಿಯಮದಲ್ಲಿ ವೈದ್ಯರುಗಳು ವರ್ಗಾವಣೆಗೊಂಡಿರುವುದರಿAದ ಸಮಸ್ಯೆ ಉಲ್ಬಣವಾಗಿದೆ.

ಇತ್ತೀಚೆಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ನೂತನ ನಿಯಮದಿಂದ ಕ್ಷೇತ್ರದಲ್ಲಿರುವ ಪ್ರಮುಖ ಆಸ್ಪತ್ರೆಗಳಾದ ಗೋಣಿಕೊಪ್ಪ ಹಾಗೂ ಸಿದ್ದಾಪುರ ಆಸ್ಪತ್ರೆಯಲ್ಲಿ ವೈದ್ಯರ ವರ್ಗಾವಣೆಯಿಂದ ಆಗಿರುವ ಸಮಸ್ಯೆಗಳನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬಳಿ ಪ್ರಸ್ತಾಪಿಸಿ ಮನವಿ ಸಲ್ಲಿಸಿದ್ದರು. ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರು ಭರವಸೆ ನೀಡಿದ್ದರು.

ಪರ್ಯಾಯ ಮಾರ್ಗವೇನು.?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೂತನ ಪ್ರಧಾನ ಕಾರ್ಯದರ್ಶಿ ಡಾ. ಹರ್ಷಗುಪ್ತ ೨೦೧೨ರಲ್ಲಿ ಜಾರಿಯಾಗಿದ್ದ ನಿಯಮಾವಳಿಯನ್ನು ಇದೀಗ ಅನುಷ್ಠಾನಕ್ಕೆ ತಂದಿದ್ದಾರೆ. ಇದರಿಂದಾಗಿ ೧೦ ವರ್ಷ ಮೇಲ್ಪಟ್ಟ ವೈದ್ಯರುಗಳು ಹಾಗೂ ಇತರ ಸಿಬ್ಬಂದಿಗಳು ವರ್ಗಾವಣೆಗೊಳ್ಳುವುದು ಕಡ್ಡಾಯವಾಗಿದೆ.

ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ನಿಯಾಮವಳಿಯಲ್ಲಿ ವಿನಾಯಿತಿಯನ್ನು ನೀಡಬೇಕಾಗಿದೆ. ರಾಜ್ಯದ ಎಲ್ಲೆಡೆ ಇರುವ ಆದೇಶವನ್ನು ಮಾರ್ಪಡಿಸಿದರಷ್ಟೇ ಕೊಡಗಿನ ವೈದ್ಯರುಗಳ ಸಮಸ್ಯೆಗೆ ಕೊಂಚ ಪರಿಹಾರ ಲಭಿಸಬಹುದಾಗಿದೆ.