ಗೋಣಿಕೊಪ್ಪಲು, ಜು. ೧೯: ಪ್ರಕೃತಿ ಉಳಿದರಷ್ಟೆ ಮನುಕುಲ ಉಳಿವು ಸಾಧ್ಯ. ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ. ನಮ್ಮ ಪ್ರಕೃತಿ, ಸಂಸ್ಕೃತಿಯ ಭಾಗವಾಗಿದೆ. ಪ್ರಕೃತಿಯ ಉಳಿವಿಗಾಗಿ ನಾವೆಲ್ಲರೂ ಕೈ ಜೋಡಿಸಬೇಕೆಂದು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ ಮಂಡ್ಯ, ಅರಣ್ಯ ಮಹಾವಿದ್ಯಾಲಯ ಪೊನ್ನಂಪೇಟೆ ಆಶ್ರಯದಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ನಿಲಯಗಳ ವಾರ್ಷಿಕೋತ್ಸವ ‘ವೃಂದಾರಕ-೨೦೨೫’ ಕಾರ್ಯಕ್ರಮ ವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಇವರು ಪ್ರಕೃತಿಯ ರಕ್ಷಣೆಗೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ, ಅರಣ್ಯದ ಒಳಗೆ ತರಗತಿಗಳು ನಡೆಯುವಂತಾಗಬೇಕು.
ಪ್ರತಿ ಶಾಲಾ ವಿದ್ಯಾರ್ಥಿಗಳನ್ನು ಪ್ರಕೃತಿಯ ಮಡಿಲಿಗೆ ವಾರ್ಷಿಕವಾಗಿ ಒಮ್ಮೆಯಾದರೂ ಕರೆದೊಯ್ಯುವ ಮೂಲಕ ಪ್ರಕೃತಿಯ ಬಗ್ಗೆ ಅರಿವಿಕೆ ನೀಡುವಂತಾಗಬೇಕು. ಇದರಿಂದ ಮಕ್ಕಳಲ್ಲಿ ಪ್ರಕೃತಿಯ ಮೇಲೆ ವಿಶೇಷವಾದ ಗೌರವ ಹಾಗೂ ಪ್ರೀತಿ ಹುಟ್ಟಲು ಸಾಧ್ಯ.
ಅರಣ್ಯ ಮಹಾ ವಿದ್ಯಾಲಯದಿಂದ ತೇರ್ಗಡೆ ಹೊಂದಿ ಉನ್ನತ ಸ್ಥಾನಗಳಿಗೆ ವಿದ್ಯಾರ್ಥಿಗಳು ತೆರಳಿದ ಸಂದರ್ಭ ನಮ್ಮ ಪ್ರಕೃತಿಯನ್ನು ಉಳಿಸುವ ದೊಡ್ಡ ಜವಾಬ್ದಾರಿಯೂ ನಮ್ಮ ಮೇಲಿದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಲಪತಿಗಳಾದ ಡಾ. ಆರ್.ಸಿ. ಜಗದೀಶ್ ಮಾತನಾಡಿ, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಉತ್ತಮ ಅಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಉತ್ತಮ ಬೋಧಕ ವರ್ಗ ವಿದ್ಯಾರ್ಥಿಗಳಿಗೆ ಲಭಿಸಿರುವುದು ಸಾಧನೆಗೆ ಕಾರಣ ವಾಗಿದೆ ಎಂದರು. ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಶೇಷ ಅಧಿಕಾರಿಗಳಾದ ಡಾ. ಕೆ.ಎಂ. ಹರಿಣಿ ಕುಮಾರ್ ಮಾತನಾಡಿದರು.
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಡೀನ್ ಡಾ. ಜಿ.ಎಂ. ದೇವಗಿರಿ ಮಾತನಾಡಿ, ಅರಣ್ಯ ಮಹಾ ವಿದ್ಯಾಲಯದ ಮೂಲ ಸೌಕರ್ಯಗಳಿಗಾಗಿ ಕುಲಪತಿಗಳು ಸಹಕಾರವನ್ನು ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ಸಾಲಿನಲ್ಲಿ ಮೂಲ ಸೌಕರ್ಯಕ್ಕಾಗಿ ರೂ. ೨೫ ಕೋಟಿ ಅನುದಾನವನ್ನು ನೀಡಿದ್ದಾರೆ. ಇದರಲ್ಲಿ ಉತ್ತಮ ಮಾದರಿಯ ಸಭಾಂಗಣ ಹಾಗೂ ವಿದ್ಯಾರ್ಥಿಗಳ ವಸತಿ ನಿಲಯಗಳ ಕಟ್ಟಡಗಳು ನಿರ್ಮಾಣವಾಗುತ್ತಿದ್ದು ಸದ್ಯದಲ್ಲಿಯೇ ಇದರ ಪ್ರಯೋಜನ ಇಲ್ಲಿಯ ವಿದ್ಯಾರ್ಥಿಗಳಿಗೆ ಲಭಿಸಲಿದೆ. ನಾನಾ ಕ್ಷೇತ್ರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಉದ್ಯೋಗವಕಾಶಗಳನ್ನು ಗಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಆಗಮಿಸಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಶಿಕ್ಷಣ ನಿರ್ದೇಶಕ ಡಾ. ಎನ್. ಶಿವಕುಮಾರ್, ಕುಲ ಸಚಿವರುಗಳಾದ ಡಾ. ಪಿ.ಎನ್. ಫಾತಿಮಾ, ವಿಸ್ತರಣಾ ನಿರ್ದೇಶಕ ಡಾ. ವಿ. ರಾಮಚಂದ್ರ, ಡೀನ್ಗಳಾದ ಡಾ. ಚಂದ್ರಪ್ಪ, ಡಾ. ಸಿ. ದೊರೆಸ್ವಾಮಿ, ಕಾರ್ಯಕ್ರಮವನ್ನು ಉದ್ದೇಶಿಸಿ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಸಹಾಯಕ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಬಿ.ಎನ್. ಸತೀಶ್, ಮುಖ್ಯ ನಿಲಯಪಾಲಕರಾದ ಡಾ. ಟಿ.ಎಸ್. ಹರೀಶ್, ನಿಲಯ ಪಾಲಕರುಗಳಾದ ಡಾ. ಲಕ್ಷಿö್ಮ ಬಳಗನೂರಮಠ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ವಾರ್ಷಿಕವಾಗಿ ವಿದ್ಯಾರ್ಥಿಗಳು ಹಲವು ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದರು. ಕಾಲೇಜಿನ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿ ಮಿಥುನ್ ಹಾಗೂ ತಂಡ ಪ್ರಾರ್ಥಿಸಿ, ನವನೀತ್ ಸ್ವಾಗತಿಸಿ, ವಾರ್ಷಿಕ ವರದಿಯನ್ನು ತನುಶ್ರೀ ಮಂಡಿಸಿ, ತಂಪನ ವಂದಿಸಿದರು.