ವೀರಾಜಪೇಟೆ, ಜು. ೧೯: ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಮಲೇತಿರಿಕೆ ಬೆಟ್ಟದ ಶ್ರೀ ಶನೇಶ್ಚರ ದೇವಸ್ಥಾನದ ವಾರ್ಷಿಕ ಪವಿತ್ರ ಶ್ರಾವಣ ಮಹೋತ್ಸವ ಜುಲೈ ೨೬ ರಿಂದ ಆ. ೧೬ ರವರೆಗೆ ಬರುವ ನಾಲ್ಕು ಶನಿವಾರಗಳಂದು ನಡೆಯಲಿದೆ ಎಂದು ಶ್ರೀ ಶನೇಶ್ಚರ ಭಕ್ತಜನ ಮಂಡಳಿಯ ಅಧ್ಯಕ್ಷ ಯುವರಾಜ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರಾವಣ ಪೂಜೆಯ ಅಂಗವಾಗಿ ತಾ. ೨೫ ರಂದು ಶುಕ್ರವಾರ ಬೆಳಿಗ್ಗೆ ಗಣಪತಿ ಹೋಮ, ದುರ್ಗಾ ಹೋಮ ನಡೆಯಲಿದೆ. ತಾ. ೨೬ ರಂದು ಬೆಳಿಗ್ಗೆ ೫ ಗಂಟೆಗೆ ಅಭಿಷೇಕ, ಬಳಿಕ ಅಲಂಕಾರ ಪೂಜೆ, ನವಗ್ರಹ ಪೂಜೆ, ೧೧ ಗಂಟೆಗೆ ದೇವರ ದರ್ಶನ, ೧೨ ಗಂಟೆಗೆ ಮಹಾಪೂಜೆ ನಂತರ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿದೆ.
ಆ. ೨ ರಂದು ಎರಡನೇ ಶ್ರಾವಣ ಶನಿವಾರದಂದು ಬೆಳಿಗ್ಗೆ ೮ ಗಂಟೆಗೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಸಲಾಗುವುದು. ೧೫ ರಂದು ಶುಕ್ರವಾರ ಏಳು ಗಂಟೆಗೆ ದೀಪೋತ್ಸವ ಹಾಗೂ ದುರ್ಗಾದೇವಿ ಪೂಜೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ, ಆ. ೧೬ ರಂದು ಆರು ಗಂಟೆಗೆ ದೇವರ ಉತ್ಸವ ಮೂರ್ತಿಯೊಂದಿಗೆ ಪೇಟೆ ಮೆರವಣಿಗೆ, ರಾತ್ರಿ ೯ ಗಂಟೆಗೆ ದೇವಾಲಯದಲ್ಲಿ ಮಹಾಪೂಜೆ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ತಿಳಿಸಿದ್ದಾರೆ.