ಇದುವರೆಗೆ ರೂ. ೧.೨೪ ಕೋಟಿ ಸಂಗ್ರಹ
ಕೂಡಿಗೆ, ಜು. ೨೦: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನ, ಸಂಗೀತ ಕಾರಂಜಿಯ ವೀಕ್ಷಣೆ ಮೂಲಕ ಇದುವರೆಗೆ ರೂ.೧.೨೪ ಕೋಟಿ ಹಣ ಪ್ರವೇಶ ಶುಲ್ಕ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದ್ದಾರೆ.
ಬೃಂದಾವನ ಮತ್ತು ಸಂಗೀತ ಕಾರಂಜಿಯ ಸಾರ್ವಜನಿಕ ವೀಕ್ಷಣೆಯನ್ನು ಕಾವೇರಿ ನೀರಾವರಿ ನಿಗಮದ ಸೂಚನೆ ಅನ್ವಯ ಹಾರಂಗಿ ನೀರಾವರಿ ಇಲಾಖೆಯ ಮುಖೇನ ೨೦೨೦ರಲ್ಲಿ ಆರಂಭಗೊಳಿಸಲಾಗಿತ್ತು. ಅಂದಿನಿAದ ಇಂದಿನವರೆಗೂ ವೀಕ್ಷಣೆಗೆ ಆಗಮಿಸಿದ್ದ ರಾಜ್ಯ ಮತ್ತು ಅಂತರರಾಜ್ಯದ ಪ್ರವಾಸಿಗರಿಂದ ಪ್ರವೇಶ ಶುಲ್ಕವಾಗಿ ಇದುವರೆಗೆ ರೂ.೧ ಕೋಟಿ ೨೪ ಲಕ್ಷ ಸಂಗ್ರಹಸಿಲಾಗಿದೆ.
ನೀರಾವರಿ ಇಲಾಖೆಯ ನಿಯಮಾನುಸಾರ ಪ್ರತಿ ಟಿಕೆಟ್ಗೆ ರೂ.೧೦ ಮತ್ತು ಮಕ್ಕಳಿಗೆ ರೂ.೫ ರಂತೆ ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ವಸೂಲಿ ಹಣ ಕಾವೇರಿ ನೀರಾವರಿ ನಿಗಮದ ಮುಖೇನ ಸರಕಾರಕ್ಕೆ ಸಂದಾಯವಾಗುತ್ತಿದೆ ಎಂದು ಪುಟ್ಟಸ್ವಾಮಿ ಮಾಹಿತಿ ಒದಗಿಸಿದ್ದಾರೆ.
ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ಬೃಂದಾವನ ಉದ್ಯಾನವನ ಮತ್ತು ಸಂಜೆ ಅತ್ಯಾಕರ್ಷಕ ಸಂಗೀತ ಕಾರಂಜಿಯ ವೀಕ್ಷಣೆಗೆ ಕಳೆದ ಡಿಸೆಂಬರ್ನಿAದ ಮೇ ತಿಂಗಳವರೆಗೆ ತಿಂಗಳಲ್ಲಿ ೨೪ ಸಾವಿರದಷ್ಟು ಪ್ರವಾಸಿಗರು ಭೇಟಿ ನೀಡಿದ್ದು, ಅಣೆಕಟ್ಟೆ ಸಂಪೂರ್ಣವಾಗಿ ಭರ್ತಿಯಾಗಿ ಅಣೆಕಟ್ಟೆಯಿಂದ ಹೊರಹರಿಯುವ ನೀರು ಧುಮುಕುವ ದೃಶ್ಯವನ್ನು ನೋಡಲು ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆೆ.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿ ವರ್ಗದವರು ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡು ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ, ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡುವ ಮೂಲಕ ಕಾರ್ಯೋನ್ಮುಖರಾಗಿದ್ದಾರೆ.
ಬೇಸಿಗೆ ರಜೆ ಮತ್ತು ಇತರೆ ದಿನಗಳಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈಗಾಗಲೇ ಅಣೆಕಟ್ಟೆಯ ಸಮೀಪದಲ್ಲೇ ಸಾಕಾನೆ ಶಿಬಿರ ಹಾಗೂ ಜಲ ಕ್ರೀಡೆ ಇರುವುದರಿಂದಾಗಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಹಾರಂಗಿಗೆ ಭೇಟಿ ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಾರಂಗಿಯ ಅಭಿವೃದ್ಧಿ ಕೂಡ ವೇಗವಾಗಿ ನಡೆಯುತ್ತಿದ್ದು, ಸಂಜೆಯ ಸಮಯದಲ್ಲಿ ಅತ್ಯಾಕರ್ಷಕ ನೋಟಕ್ಕಾಗಿ ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗಿದೆ. ಬೇಸಿಗೆ ತಿಂಗಳುಗಳಲ್ಲಿ ತಿಂಗಳಿಗೆ ಅಂದಾಜು ೨೦ ಸಾವಿರದಿಂದ ೨೪ ಸಾವಿರದಷ್ಟು ಪ್ರವಾಸಿಗರು ಭೇಟಿ ನೀಡುತ್ತಿರುವುದಾಗಿ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ