ಮುಳ್ಳೂರು, ಜು. ೨೦: ಸೋಮವಾರಪೇಟೆ ಬ್ಯುಟಿಶಿಯನ್ ಅಸೋಸಿಯೇಷನ್ ವತಿಯಿಂದ ಕೊಡಗಿನ ಸೌಂದರ್ಯ ವರ್ದಕರಿಗೆ ಒಂದು ದಿನದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ಶನಿವಾರಸಂತೆಯ ಖಾಸಗಿ ರೆಸಾರ್ಟ್ನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ಬೆಂಗಳೂರಿನ ಮೇಕಪ್ ಕಲಾವಿದ ಸೋಮು ಹಾಸನ್ ಉದ್ಘಾಟಿಸಿ ಮಾತನಾಡಿ, ಇಂದು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದರಿಂದ ಸೌಂದರ್ಯ ವರ್ದಕರು ತಮ್ಮ ವೃತ್ತಿಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಎಷ್ಟೆ ಕಲಿತರೂ ಸಾಲದು.
ಸೌಂದರ್ಯ ಕ್ಷೇತ್ರದಲ್ಲೂ ಸಹ ಹೊಸ ಬಗೆಯ ತಂತ್ರಜ್ಞಾನ ರೂಪುಗೊಳ್ಳುತ್ತಿದೆ. ಆದರೆ ಕೆಲವು ಸೌಂದರ್ಯ ವರ್ದಕರು ಹಳೆಯ ಪದ್ಧತಿಯಂತೆ ನಿರ್ವಹಣೆ ಮಾಡುತ್ತಿರುವುದರಿಂದ ಗ್ರಾಹಕರು ಇದನ್ನು ಇಷ್ಟಪಡುತ್ತಿಲ್ಲ. ಈ ದಿಸೆಯಲ್ಲಿ ಸೌಂದರ್ಯ ವರ್ದಕರು ಆಧುನಿಕ ತಂತ್ರಜ್ಞಾನ ಪದ್ಧತಿಯನ್ನು ಅನುಸರಿಸುವ ಮೂಲಕ ಸೌಂದರ್ಯ ಕ್ಷೇತ್ರವನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಪ್ರತಿಮಾ ಮಾತನಾಡಿ, ಸೌಂದರ್ಯ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಪರಿಚಯಿಸುವ ಉದ್ದೇಶದಿಂದ ಸೌಂದರ್ಯ ವರ್ದಕರಿಗೆ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸೌಂದರ್ಯ ವಲಯವನ್ನು ಬೆಳೆಸಿದಂತಾಗುತ್ತದೆ. ಆದರೆ ಇಂದಿನ ಸಮಾಜದಲ್ಲಿ ಸೌಂದರ್ಯ ಕ್ಷೇತ್ರದ ಬಗ್ಗೆ ಟೀಕೆ ಮಾಡುವವರು ಸಹ ಇರುತ್ತಾರೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು ಸಂಘಟನೆಯನ್ನು ಬೆಳೆಸುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್ ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸೌಂದರ್ಯ ವಲಯವೂ ಆಧುನಿಕವಾಗಿ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರಪೇಟೆ ಸಂಘಟನೆಯು ಇದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿರುವುದು ಮತ್ತು ಸಂಘಟನೆಯನ್ನು ಬೆಳೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಅಧ್ಯಕ್ಷೆ ರತ್ನ ಯತೀಶ್, ಪ್ರಧಾನ ಕಾರ್ಯದರ್ಶಿ ಪವಿತ್ರ, ಕುಶಾಲನಗರ ತಾಲೂಕು ಕಾರ್ಯದರ್ಶಿ ತಾಜ್, ಮಡಿಕೇರಿ ತಾಲೂಕು ಕಾರ್ಯದರ್ಶಿ ಜಾನ್ಸಿ, ಮೇಕಪ್ ಕಲಾವಿದೆ ಆಶಾ, ಚಿರಂತ್ ಮುಂತಾದವರು ಇದ್ದರು. ಈ ಸಂದರ್ಭ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.