(ವನಿತ ಚಂದ್ರಮೋಹನ್)
ಕುಶಾಲನಗರ, ಜು. ೨೧: ಕೊಡಗು, ಮೈಸೂರು ಜಿಲ್ಲೆಗಳನ್ನು ಬೆಸೆಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ಕಾಲದ ಸುಮಾರು ೧೭೯ ವರ್ಷ ಸಂದಿರುವ ಸೇತುವೆಗೆ ಪುನಶ್ಚೇತನ ಕಲ್ಪಿಸುವ ನಿಟ್ಟಿನಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಚಿಂತನೆ ಹರಿಸಿದ್ದಾರೆ.
ಕುಶಾಲನಗರ -ಕೊಪ್ಪ ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಬಳಿ ಕಂಡುಬರುವ ಈ ಸೇತುವೆ ೧೮೪೬ ರಲ್ಲಿ ಬ್ರಿಟಿಷರು ನಿರ್ಮಿಸಿದ್ದು, ಈ ಸೇತುವೆ ಇಂದಿಗೂ ಗಟ್ಟಿಮುಟ್ಟಾಗಿ ಇರುವುದನ್ನು ಕಾಣಬಹುದು. ಅಂದಿನ ಕಾಲಘಟ್ಟದ ತಾಂತ್ರಿಕತೆ ಸಾರುವ ಈ ಸೇತುವೆ ನಿರ್ವಹಣೆ ಮಾಡಿದಲ್ಲಿ ಇನ್ನೂ ಮುಂದಿನ ನೂರಾರು ವರ್ಷಗಳು ಕೂಡ ಬಾಳಿಕೆ ಬರುವ ಸಾಧ್ಯತೆ ಇದೆ.
ಇದೀಗ ಈ ಸೇತುವೆ ವಾಹನ ಸಂಚಾರ ಇಲ್ಲದೆ ಸಂಪೂರ್ಣ ನಿರ್ಲಕ್ಷö್ಯಕ್ಕೆ ಒಳಗಾಗಿರುವ ಕಾರಣ ಕಾಡು ಗಿಡ ಮರಗಳಿಂದ ಆವೃತಗೊಂಡಿರುವುದನ್ನು ಕಾಣಬಹುದು. ೨೫ ವರ್ಷಗಳ ಹಿಂದೆ ಸಮೀಪದಲ್ಲಿ ನಿರ್ಮಾಣಗೊಂಡ ನೂತನ ಸೇತುವೆ ಕಾಮಗಾರಿ ಸಂದರ್ಭ ಈ ಸೇತುವೆಯನ್ನು ತೆರವುಗೊಳಿಸಲು ಅಂದಿನ ಸರಕಾರ ನೂತನ ಸೇತುವೆಯ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿತ್ತು.
ಈ ಬಗ್ಗೆ ಮಾಹಿತಿ ದೊರೆತ ಸ್ಥಳೀಯ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರಾದ ಚಂದ್ರಮೋಹನ್ ಮತ್ತು ಸಮಾಜ ಸೇವಕ ಕಾಫಿ ಉದ್ಯಮಿ ಪಿ.ಕೆ. ದೇವಯ್ಯ ಅವರುಗಳು ಅಂದಿನ ಲೋಕೋಪಯೋಗಿ ಸಚಿವ ಧರ್ಮಸಿಂಗ್ ಅವರಿಗೆ ಪತ್ರವನ್ನು ಬರೆದು ಸೇತುವೆಯನ್ನು ಕೆಡವದೆ ಉಳಿಸಿ ಸಂರಕ್ಷಿಸುವAತೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸಚಿವರು ಸ್ಪಂದಿಸಿದ ಕಾರಣ ಸೇತುವೆಯನ್ನು ತೆರವುಗೊಳಿಸದೆ ಇದ್ದಿದ್ದನ್ನು ಸ್ಮರಿಸಬಹುದು. ಆದರೆ ಸೇತುವೆ ನಿರ್ವಹಣೆಯ ಕೊರತೆಯನ್ನು ಮಾತ್ರ ಎದುರಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಭಾರವಿ ಕನ್ನಡ ಸಂಘ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಸೇತುವೆಯ ಸ್ವಚ್ಛತೆ ಸಂರಕ್ಷಣೆ ಮಾಡುವ ಕಾಯಕ ನಿರಂತರವಾಗಿ ನಡೆಯುತ್ತಿದೆ.
ಜೊತೆಗೆ ಕಾವೇರಿ ಪರಿಸರ ರಕ್ಷಣಾ ಸಮಿತಿ ಮೂಲಕ ಸೇತುವೆಯ ಒಂದು ಭಾಗದಲ್ಲಿ ಮರ ಗಿಡಗಳನ್ನು ನೆಡುವ ಮೂಲಕ ಹಸಿರೀಕರಣ ಕಾರ್ಯ ಕೂಡ ಕಾಣಬಹುದು. ಈ ಸೇತುವೆ ಅಪರೂಪದ ಪುರಾತನ ತಾಂತ್ರಿಕತೆಯ ಸಂಕೇತವಾಗಿದೆ.
ಇಂತಹ ಕಾಮಗಾರಿಗಳು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯುತ್ತವೆ. ಆದರೆ ಇಲ್ಲಿ ನಿರ್ಲಕ್ಷö್ಯಕ್ಕೆ ಒಳಗಾಗಿದೆ. ಸರಕಾರ ಗಮನಹರಿಸಿ ಸಂರಕ್ಷಣೆ ಮಾಡಬೇಕಾಗಿದೆ ಎಂದು ಹೈಕೋರ್ಟ್ ವಕೀಲರಾದ ಎಂ ಪಿ ಅಮೃತೇಶ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಬAಧ ಸಂಬAಧಿಸಿದ ಇಲಾಖೆಗಳು ಸೇತುವೆಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿತ್ತು. ಆದರೆ ಯಾವುದೇ ರೀತಿಯ ಕ್ರಮ ನಡೆದಿಲ್ಲ.
೧೮೪೬ ರಲ್ಲಿ ನಿರ್ಮಾಣಗೊಂಡ ಸೇತುವೆಯನ್ನು ೧೮೪೮ರಲ್ಲಿ ಕೊಡಗು ಮೈಸೂರು ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಲೋಕಾರ್ಪಣೆ ಗೊಳಿಸಿದ್ದರು. ಅದಕ್ಕೆ ಪ್ರೆಷರ್ಪೇಟ್ ಬ್ರಿಡ್ಜ್ ಎಂದು ನಾಮಕರಣ ಗೊಳಿಸಲಾಗಿತ್ತು. ಇದೆ ಸೇತುವೆ ಮೇಲೆ ಉದ್ಘಾಟನೆ ಸಂದರ್ಭ ಅಳವಡಿಸಿರುವ ಕಲ್ಲಲ್ಲಿ ಇದನ್ನು ಕಾಣಬಹುದು. ೨೦೦೧-೨ರ ಅವಧಿಯಲ್ಲಿ ಇದರ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣಗೊಂಡು ಬಳಕೆಗೆ ಮುಕ್ತವಾದ ನಂತರ ಈ ಸೇತುವೆ ಮೂಲೆಗುಂಪಾಗಿದೆ. ಸೇತುವೆಯ ಎರಡೂ ಬದಿಗಳಲ್ಲಿ ಬೆಳೆದಿರುವ ಕಾಡು ಗಿಡಗಳನ್ನು ತೆರವುಗೊಳಿಸಿ, ಸೇತುವೆಗೆ ಮೆರುಗು ನೀಡುವ ಕೆಲಸ ಆಗಬೇಕಾಗಿದೆ.
ಈ ಭಾಗವನ್ನು ಸಾರ್ವಜನಿಕರ ವಿಹಾರ ಕೇಂದ್ರವಾಗಿ ಪರಿವರ್ತಿಸಲು ದೀಪ ಅಲಂಕಾರ ಮಾಡುವ ಅಗತ್ಯ ಇದೆ. ಇಲ್ಲಿ ವಾರಕ್ಕೆ ಒಂದು ಬಾರಿ ಕಾವೇರಿ ನದಿಗೆ ಆರತಿ ಬೆಳಗುವ ಯೋಜನೆ ಕೂಡ ರೂಪಿಸ ಬಹುದು. ಈ ಮೂಲಕ ಜಿಲ್ಲೆಯ ಪ್ರವೇಶ ದ್ವಾರದಲ್ಲಿಯೇ ಪ್ರವಾಸಿಗರ ಗಮನ ಸೆಳೆಯಬಹುದು ಎನ್ನುವುದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖ ಕೊಡಗನ ಹರ್ಷ ಅವರ ಅಭಿಪ್ರಾಯವಾಗಿದೆ.
ಈ ಬಗ್ಗೆ ಈಗಾಗಲೇ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು ಮತ್ತು ಕ್ಷೇತ್ರ ಶಾಸಕ ಡಾ ಮಂತರ್ ಗೌಡ ಅವರುಗಳಿಗೆ ಮನವಿ ಸಲ್ಲಿಸಲಾಗಿದೆ. ಸೇತುವೆಯ ಎರಡು ಭಾಗಗಳಲ್ಲಿ ದೀಪಗಳ ವ್ಯವಸ್ಥೆ ಕಲ್ಪಿಸಲು ಕೂಡ ಕ್ರಮ ಕೈಗೊಳ್ಳಬಹುದು.
ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೂಡ ಶತಮಾನ ಕಂಡ ಸೇತುವೆಯ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದ್ದು ಸೇತುವೆಯ ಸಂರಕ್ಷಣೆಗೆ ಶಾಸಕರ ಮೂಲಕ ಅನುದಾನ ಪಡೆದು ಅಭಿವೃದ್ಧಿ ಪಡಿಸುವ ಬಗ್ಗೆ ಕೂಡ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಐತಿಹಾಸಿಕ ಸೇತುವೆ ಸುಮಾರು ೧೩೦ ಮೀಟರ್ ಉದ್ದವಿದ್ದು ಸುಮಾರು ೮ ಮೀಟರ್ ಅಗಲದ ವಿಸ್ತೀರ್ಣದಲ್ಲಿ ಕಾಣಬಹುದು. ಪ್ರಸಕ್ತ ನೂತನ ಸೇತುವೆಯಲ್ಲಿ ಸಂಚಾರ ವ್ಯವಸ್ಥೆ ಇರುವ ಕಾರಣ ಈ ಸೇತುವೆ ಯಾವುದೇ ರೀತಿಯ ನಿರ್ವಹಣೆ ಇಲ್ಲದೆ ಇರುವುದನ್ನು ಕಾಣಬಹುದು. ಸೇತುವೆಯ ಮೇಲ್ಭಾಗದಿಂದ ಕೊಡಗು ಮೈಸೂರು ಸೇರಿದಂತೆ ಎರಡು ಜಿಲ್ಲೆಗಳ ಗಡಿ ಭಾಗದಲ್ಲಿ ಹರಿಯುವ ಜೀವನದಿ ಕಾವೇರಿಯ ಸೊಬಗು ಸೌಂದರ್ಯವನ್ನು ಸವಿಯಲು ಒಂದು ವೇದಿಕೆ ರೂಪಿಸುವ ಸಂಬAಧ ಈ ಸೇತುವೆಯ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ಸರಕಾರದ ಮೂಲಕ ರೂಪುಗೊಳ್ಳಬೇಕಾಗಿದೆ.
ಜಿಲ್ಲೆಯ ಗಡಿಭಾಗದಲ್ಲಿ ಎರಡು ಸೇತುವೆಯನ್ನು ಒಳಗೊಂಡAತೆ ಬೃಹತ್ ಗಾತ್ರದ ಪ್ರವೇಶ ದ್ವಾರ ಕೂಡ ನಿರ್ಮಿಸುವ ಬಗ್ಗೆ ಚಿಂತನೆ ಆಗಬೇಕಿದೆ. ಇದರೊಂದಿಗೆ ಕೊಡಗು ಜಿಲ್ಲೆಗೆ ಭೇಟಿ ನೀಡುವ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಜೊತೆಗೆ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳ ಬಗ್ಗೆ ಕನಿಷ್ಟ ಮಾಹಿತಿ ನೀಡುವ ಕೇಂದ್ರ ಒಂದು ಕೂಡ ಇಲ್ಲಿ ನಿರ್ಮಾಣಗೊಳ್ಳುವ ಅಗತ್ಯತೆ ಇದ್ದು ಈ ಬಗ್ಗೆ ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸಬೇಕಾಗಿದೆ.
ಸೇತುವೆಯ ಗಡಿಭಾಗದ ಒಂದು ಕಡೆ ಕಾವೇರಿ ಪ್ರತಿಮೆ ನಿರ್ಮಾಣವಾಗಿದ್ದು ಇನ್ನೊಂದು ಪಾರ್ಶ್ವದಲ್ಲಿ ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸಿಗರ ಮನಸೂರೆ ಗೊಳ್ಳುವ ಯೋಜನೆಗಳ ಕಾಯಕ ಆಗಬೇಕಾಗಿದೆ.