ಕಡಂಗ, ಜು. ೨೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊದ್ದಮಾನಿ, ಕರಡ ಗ್ರಾಮದಲ್ಲಿ ಕಳೆದ ೪ ದಿನಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳೆಗಾರರ ತೋಟಗಳಿಗೆ ಲಗ್ಗೆಇಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ನಾಶಪಡಿಸುತ್ತಿವೆ. ಪೊದ್ದಮಾನಿ ಗ್ರಾಮದ ಅನ್ನಂಬಿರ ಗಿರೀಶ್ ಅವರ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ತೋಟದಲ್ಲಿ ಬೆಳೆದ ಕಾಫಿ, ತೆಂಗು, ಬಾಳೆ, ಅಡಿಕೆ ಇನ್ನಿತರ ಫಸಲು ಭರಿತ ಕೃಷಿ ಗಿಡಗಳನ್ನು ತುಳಿದು ಅಪಾರ ನಷ್ಟ ಉಂಟು ಮಾಡಿದೆ. ಇದೇ ಗ್ರಾಮದ ಅನ್ನಂಬಿರ ಕುಟುಂಬಸ್ಥರ ತೋಟಗಳು ಕಾಡಾನೆ ದಾಳಿಗೆ ತುತ್ತಾಗಿವೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಸಂಬAಧಪಟ್ಟ ಅರಣ್ಯ ಇಲಾಖೆ ನಷ್ಟ ಅನುಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಉಪಟಳ ತಡೆಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ನೌಫಲ್