ಚೆಯ್ಯಂಡಾಣೆ, ಜು. ೨೧: ಕರಡ, ನರಿಯಂದಡ, ಕೋಕೇರಿ, ಚೇಲಾವರ ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿAದ ಕಾಡಾನೆಗಳ ಹಿಂಡು ಗ್ರಾಮದ ಬೆಳಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಕೃಷಿ ಗಿಡಗಳನ್ನು ಹಾನಿಪಡಿಸಿದಲ್ಲದೆ ರಾಜ್ಯ ಹೆದ್ದಾರಿಯಲ್ಲಿ ರಾಜಾರೋಷವಾಗಿ ಸಂಚರಿಸುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ಕರಡ ಗ್ರಾಮದ ಐತಿಚಂಡ ರೋಹಿತ್, ಮಧು, ಚೋಟು, ಭೀಮಯ್ಯ, ನಾಚಪ್ಪ, ಪ್ರಕಾಶ್, ಪಟ್ರಪಂಡ ಜಗದೀಶ್ ರವರ ಹಾಗೂ ನರಿಯಂದಡ ಗ್ರಾಮದ ಬೋವ್ವೆರಿಯಂಡ ಲವಕುಮಾರ್, ಚೇಲಾವರದ ಜೈನೀರ ತನು ಹಾಗೂ ಕುಟುಂಬಸ್ಥರ, ಬಾಚಮ್ಮಂಡ ಲೋಕೇಶ್, ರಾಮಕೃಷ್ಣ, ಪವನ್ ಅವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆ ಬಾಳೆ, ಅಡಿಕೆ, ಕಾಫಿ, ಮತ್ತಿತರ ಗಿಡಗಳನ್ನು ತುಳಿದು ನಾಶ ಪಡಿಸಿದೆ. ವೀರಾಜಪೇಟೆ ನಾಪೋಕ್ಲು ರಾಜ್ಯ ಹೆದ್ದಾರಿಯ ಚೆಯ್ಯಂಡಾಣೆಯ ಮುಖ್ಯ ರಸ್ತೆಯಲ್ಲಿ ೪ ಆನೆ ಹಾಗೂ ಒಂದು ಮರಿಯಾನೆ ರಸ್ತೆಯಲ್ಲಿ ಸಂಚರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗ್ರಾಮಸ್ಥರು ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಈ ವ್ಯಾಪ್ತಿಯಲ್ಲಿ ೨೦ ಕ್ಕೂ ಅಧಿಕ ಕಾಡಾನೆಗಳು ತೋಟದಲ್ಲೇ ಬೀಡು ಬಿಟ್ಟಿದೆ,ಬೆಳಂಬೆಳಿಗ್ಗೆ ಕಾಡಾನೆಗಳು ಜನರ ಕಣ್ಣಿಗೆ ಕಾಣಿಸುತಿದ್ದು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುವ ಮುಖ್ಯ ರಸ್ತೆಯಲ್ಲಿಯೆ ಕಾಡಾನೆ ಸಂಚರಿಸುತ್ತಿದೆ ಕೂಡಲೇ ಸಂಬAಧ ಪಟ್ಟ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು ಹಾಗೂ ನಷ್ಟ ಹೊಂದಿದವರಿಗೆ ಸೂಕ್ತ ಪರಿಹಾರ ಒದಗಿಸ ಬೇಕೆಂದು ಆಗ್ರಹಿಸಿದ್ದಾರೆ.

ಕಾಡಾನೆ ದಾಳಿ ನಡೆಸಿದ ಸ್ಥಳಕ್ಕೆ ವೀರಾಜಪೇಟೆ ವಲಯ ಆರ್‌ಎಫ್‌ಓ ನೇತೃತ್ವದಲ್ಲಿ ಶ್ರೀನಿವಾಸ್ ಹಾಗೂ ಕ್ಯಾಂಪ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು.