ಕಣಿವೆ, ಜು. ೩೦: ಕಳೆದ ವರ್ಷ ಕೆಜಿ ಯೊಂದಕ್ಕೆ ಬರೋಬ್ಬರಿ ೬೦ ರೂ ಬೆಲೆಗೆ ತೂಗಿದ್ದ ಸಿಹಿ ಗೆಣಸು ಈಗ ಕೇವಲ ೯ ರೂ ಗೆ ಬಿಕರಿಯಾಗುತ್ತಿದೆ. ಹಾಗಾಗಿ ಕಳೆದ ವರ್ಷ ರೈತನ ಮನೆ ಬೆಳಗಿದ್ದ ಸಿಹಿ ಗೆಣಸು ಈ ವರ್ಷ ಪೂರ್ಣ ಮನೆ ಹಾಗೂ ಮನವನ್ನು ತೊಳೆದು ತೀವ್ರ ನಿರಾಸೆ ಮೂಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲಿ ಶುಂಠಿ ಫಸಲಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಭಾರೀ ನಷ್ಟಕ್ಕೆ ಸಿಲುಕಿದ್ದ ಬಹುತೇಕ ರೈತರು ಅದೇ ಶುಂಠಿ ಬೆಳೆದ ಹೊಲ ಗದ್ದೆಗಳಲ್ಲಿ ಸಿಹಿ ಗೆಣಸಿನ ಬಳ್ಳಿಯನ್ನು ಬಿತ್ತನೆ ಮಾಡಿದ್ದರು. ಉತ್ತಮ ಮಳೆ - ಅಧಿಕ ಇಳುವರಿ ಈ ವರ್ಷ ರೈತರ ಪಾಲಿಗೆ ಅತ್ಯಂತ ಹರ್ಷಧಾರೆಯಾಗಿ ಕಾಲ ಕಾಲಕ್ಕೆ ನಿರಂತರ ಮಳೆ ಸುರಿದದ್ದರಿಂದ ಸಿಹಿಗೆಣಸು ಫಸಲು ಉತ್ತಮವಾಗಿ ಬೆಳೆದು ಇಳುವರಿಯೂ ತೃಪ್ತಿದಾಯಕವಾಗಿದೆ. ಆದರೆ ಮಾರುಕಟ್ಟೆಗೆ ಅತ್ಯಧಿಕ ಪ್ರಮಾಣದ ಸಿಹಿ ಗೆಣಸು ಪೂರೈಕೆಯಾಗುತ್ತಿರುವುದರಿಂದ ಬೇಡಿಕೆ ಕಡಿಮೆಯಾಗಿ ಬೆಲೆ ಸಂಪೂರ್ಣವಾಗಿ ಕ್ಷೀಣಿಸಿದೆ. ೨೦೨೪ ರಲ್ಲಿ ಬಂಪರ್ ಬೆಲೆ : ಕಳೆದ ವರ್ಷ ಜೂನ್ ನಿಂದ ಆಗಸ್ಟ್ ತಿಂಗಳಿನವರೆಗೂ ಮಳೆಯೇ ಬಾರದ ಕಾರಣ ಸಿಹಿಗೆಣಸು ಬೆಳೆ ಕಳೆಗುಂದಿತ್ತು.ಕ್ರಮೇಣ ಇಳುವರಿಯಲ್ಲಿ ಪ್ರತಿಕೂಲ ಪರಿಣಾಮ ಉಂಟಾದ್ದರಿAದ ಮಾರುಕಟ್ಟೆಯಲ್ಲಿನ ಬೇಡಿಕೆಗೆ ತಕ್ಕಂತೆ ಸಿಹಿ ಗೆಣಸು ಪೂರೈಕೆಯಾಗಲಿಲ್ಲ. ಹಾಗಾಗಿ ಇದರ ಬೆಲೆ ಕೆಜಿಯೊಂದಕ್ಕೆ ಗರಿಷ್ಠ ೬೦ ರಿಂದ ೭೦ ರೂ ವರೆಗೂ ಏರಿಕೆಯಾಗಿತ್ತು.

ಇತಿಹಾಸ ದಾಖಲಿಸಿದ ಬೆಲೆ : ದಶಕಗಳ ಕಾಲದಿಂದಲೂ ಬಡ ರೈತನ ಸಂಜೀವಿನಿಯಾಗಿರುವ ಈ ಸಿಹಿ ಗೆಣಸು ಫಸಲು ಕೆಜಿ ಯೊಂದಕ್ಕೆ ೨೦ ರೂ ದಾಟಿದ ಇತಿಹಾಸವೇ ಇರಲಿಲ್ಲ. ಆದರೆ, ಕಳೆದ ೨೦೨೪ ರ ಜುಲೈ ನಲ್ಲಿ ಸಿಹಿಗೆಣಸು ಬೆಲೆ ೬೦ ರಿಂದ ೭೦ ರೂಗಳವರೆಗೂ ಏರಿಕೆ ಕಾಣುವ ಮೂಲಕ ಹೊಸ ಇತಿಹಾಸ ದಾಖಲಿಸಿತ್ತು. ಇದರಿಂದಾಗಿ ಸಿಹಿ ಗೆಣಸು ಬೆಳೆದಿದ್ದ ಬಹಳ ಮಂದಿ ಕೃಷಿಕರು ಮಂದಹಾಸದ ನಗು ಬೀರಿದ್ದರು.

ವರ್ತಕರಿಂದಲೂ ಬೆಳೆಗಾರರಿಗೆ ನಷ್ಟ : ರೈತರು ಬೆಳೆದ ಗೆಡ್ಡೆ, ಗೆಣಸು ಖರೀದಿಸುವ ವರ್ತಕರು ಹಾಗೂ ಮದ್ಯವರ್ತಿಗಳು ರೈತರು ಕಷ್ಟ ಪಟ್ಟು ಬೆಳೆದ ಫಸಲನ್ನು ಬೇಕಾ ಬಿಟ್ಟಿಯಾಗಿ ಖರೀದಿಸುತ್ತಿದ್ದಾರೆ. ಅಂದರೆ ದಪ್ಪ ಹಾಗೂ ಉದ್ದ ವಿರುವ ಸಿಹಿ ಗೆಣಸನ್ನು ಚೀಲಕ್ಕೆ ತುಂಬಿಸುತ್ತಾರೆ. ಸಣ್ಣ ಸಣ್ಣ ಫಸಲನ್ನು ಮನ ಬಂದAತೆ ಬಿಸಾಡಿ ತೆರಳುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಮಾರುಕಟ್ಟೆಯಲ್ಲಿ ಸಣ್ಣ ಫಸಲಿಗೆ ಬೆಲೆ ಇಲ್ಲಾ ಎಂಬ ಸಬೂಬು ಹೇಳುತ್ತಾ ಅಪಾರ ಪ್ರಮಾಣದಲ್ಲಿ ರೈತರಿಗೆ ನಷ್ಟ ಮಾಡುತ್ತಿದ್ದಾರೆ.- ಕೆ.ಎಸ್. ಮೂರ್ತಿ