ಕಣಿವೆ, ಜು. ೩೦: ವಿಶ್ವವಿಖ್ಯಾತ ಮೈಸೂರು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳು ಆಗಸ್ಟ್ ೩ ರಂದು ಪ್ರಯಾಣ ಬೆಳೆಸಲು ಇಲಾಖೆ ಸಜ್ಜುಗೊಳಿಸಿದೆ.

ತಂಡದಲ್ಲಿ ೫೩ ರ ಪ್ರಾಯದ ಪ್ರಶಾಂತ್, ೪೫ ರ ಪ್ರಾಯದ ಧನಂಜಯ ಹಾಗೂ ಕಾವೇರಿ, ೨೪ ರ ಪ್ರಾಯದ ಕಂಜನ್ ಭಾನುವಾರ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ. ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಹಾಗೆಯೇ ಸಾಕಾನೆಗಳೊಂದಿಗೆ ಪ್ರಶಾಂತ್ ಆನೆಯ ಮಾವುತ ಚಿಣ್ಣಪ್ಪ, ಕಾವಾಡಿ ಚಂದ್ರ, ಧನಂಜಯ ಆನೆಯ ಮಾವುತ ಭಾಸ್ಕರ್, ಕಾವಾಡಿ ರಾಜಣ್ಣ, ಕಾವೇರಿ ಆನೆಯ ಮಾವುತ ಜೆ.ಕೆ.ಡೋಬಿ, ಕಾವಾಡಿ ಸಾಜನ್ ಅವರ ಕುಟುಂಬಗಳೂ ಕೂಡ ಪ್ರಯಾಣ ಬೆಳೆಸಲಿವೆ.

ಕಂಜನ್ ಕಳೆದ ಎರಡು ವರ್ಷಗಳಿಂದ ಮೈಸೂರು ದಸರಾಕ್ಕೆ ತೆರಳಿದರೆ, ಪ್ರಶಾಂತ್ ಸತತ ೧೫ ವರ್ಷಗಳಿಂದಲೂ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವುದು ಇಲ್ಲಿ ವಿಶೇಷದ ಸಂಗತಿಯಾಗಿದೆ.

ದಸರಾದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಆನೆಗಳಿಗೆ ಈಗಾಗಲೇ ಇಲಾಖೆಯ ನಿರ್ದೇಶನ ಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಾವಾಡಿಗಳು ಈ ಸಾಕಾನೆಗಳ ವಿಶೇಷ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಈ ಆನೆಗಳ ದಷ್ಟ ಪುಷ್ಟತೆ ಹಾಗೂ ಉತ್ತಮ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಈ ಆನೆಗಳನ್ನು ನಿತ್ಯವೂ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಹೆಸರು ಕಾಳು, ಬೆಲ್ಲ, ಭತ್ತದ ಹುಲ್ಲು, ಉಪ್ಪು, ರಾಗಿ ಮುದ್ದೆಗಳನ್ನು ವಿಶೇಷವಾಗಿ ಈ ಸಾಕಾನೆಗಳಿಗೆ ನೀಡಲಾಗುತ್ತಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆನೆಗಳಿಗೆ ಶೀತವಾಗುತ್ತೆ ಎಂಬ ಕಾರಣಕ್ಕೆ ಅವುಗಳ ನೆತ್ತಿಗೆ ಹರಳೆಣ್ಣೆ ಲೇಪಿಸುತ್ತಿಲ್ಲ ಎನ್ನಲಾಗುತ್ತಿದೆ.