ಮಡಿಕೇರಿ, ಜು. ೩೦: ಹೂಬನ, ಉದ್ಯಾನವನ, ಪ್ರಕೃತಿಯ ರಕ್ಷಣೆಯೊಂದಿಗೆ ಬರುವ ಪ್ರಕೃತಿ ಪ್ರಿಯರಿಗೆ ಪ್ರಕೃತಿಯ ಸವಿಯನ್ನು ಉಣಪಡಿಸಬೇಕಾದ ಜಿಲ್ಲಾ ತೋಟಗಾರಿಕಾ ಇಲಾಖೆಯು ಯಾರ ಗಮನಕ್ಕೂ ತಾರದೆ ಹಾಗೂ ಗುಟ್ಟಾಗಿ ೧೫ ಕೋಟಿ ವೆಚ್ಚದ ಗ್ಲಾಸ್ ಬ್ರಿಡ್ಜ್ ಮತ್ತು ಅದರ ಜೊತೆಯಲ್ಲಿ ರಾಜಸೀಟಿನ ಒಳಗೆ ಫುಡ್ ಕೋರ್ಟ್ ಅನ್ನು ಆರಂಭಿಸಲು ತೀರ್ಮಾನಿಸಿ ಈ ಬಗ್ಗೆ ಟೆಂಡರ್ ಆಹ್ವಾನಿಸಿದೆ.
ಜಿಲ್ಲೆಯ ಮಾಧ್ಯಮಗಳಲ್ಲಿ ಯಾವುದೇ ಪ್ರಕಟಣೆ ನೀಡದೆ ಜಿಲ್ಲೆಯ ಜನರನ್ನು ಕತ್ತಲೆಯಲ್ಲಿಟ್ಟು ಗುಟ್ಟಾಗಿ ಬೆಂಗಳೂರಿನಲ್ಲಿಯೇ ಈ ಟೆಂಡರ್ ಪ್ರಕ್ರಿಯೆಗೆ ತಾರೀಕು ೧೦ರಂದು ಚಾಲನೆ ನೀಡಿದ್ದು ಈ ಬಗ್ಗೆ ತಾ. ೧೭ರಂದು ಟೆಂಡರುದಾರರೊAದಿಗೆ ಪೂರ್ವಾಭಾವಿ ಸಭೆಯನ್ನು ನಡೆಸಲಾಗಿದೆ.
ಅಲ್ಲದೆ ತಾರೀಕು ೩೧ ಕೊನೆಯ ದಿನಾಂಕ ಎಂದು ನಮೂದಿಸಿದ್ದು ರೂಪಾಯಿ ೧೫, ೫೧,೪೨,೯೭೨ ಟೆಂಡರ್ ಮೊತ್ತ ಎಂದು ನಿಗದಿಪಡಿಸಿದೆ. ಈ ಮೊತ್ತ ಜಿಎಸ್‌ಟಿ ಅನ್ನು ಹೊರತುಪಡಿಸಿ ಎಂದೂ ಕೂಡ ನಮೂದಿಸಲಾಗಿದೆ. ಟೆಂಡರ್ ಶುಲ್ಕ ೨೫೦೦ ಆಗಿದ್ದು ಇಎಂಡಿ ೫ ಲಕ್ಷ ಎಂದು ನಿಗದಿಪಡಿಸಲಾಗಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಜಂಟಿ ನಿರ್ದೇಶಕರ ಕಚೇರಿಯಲ್ಲಿ ತಾರೀಕು ೧೭ರಂದು ಬೆಳಿಗ್ಗೆ ೧೧ ಗಂಟೆಗೆ ಸಭೆ ನಡೆದಿದ್ದು, ಟೆಂಡರ್ ಸಲ್ಲಿಸಲು ಕೊನೆಯ ದಿನ ತಾರೀಕು ೩೧ ಸಂಜೆ ೫ ಎಂದು ತಿಳಿಸಲಾಗಿದೆ. ಆಗಸ್ಟ್ ೧ ರಂದು ತಾಂತ್ರಿಕ ಬಿಡ್ ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಅನ್ನು ತೆರೆಯಲಿದ್ದು ತಾರೀಕು ೫ರಂದು ಆರ್ಥಿಕ ಬಿಡ್ಡನ್ನು ತೆರೆಯಲಾಗುವುದೆಂದು ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಮಾಜಿ ಸಚಿವ ಯಂ.ಸಿ.ನಾಣಯ್ಯ, ವಿವಿಧ ಸಂಘ ಸಂಸ್ಥೆಗಳು ಹಾಗೂ ಬಿಜೆಪಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ನಗರಸಭೆ ಕೂಡ ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಅದರ ಉಪಾಧ್ಯಕ್ಷ ಮಹೇಶ್ ಜೈನಿ ನಿನ್ನೆ ಸ್ಪಷ್ಟಪಡಿಸಿದ್ದಾರೆ.