ಸೋಮವಾರಪೇಟೆ, ಜು. ೩೧: ಬೇಳೂರು ಗ್ರಾಮ ಪಂಚಾಯಿತಿ ಯಲ್ಲಿ ರೂ. ೧೨ ಲಕ್ಷಕ್ಕೂ ಅಧಿಕ ಹಣ ದುರುಪಯೋಗವಾಗಿದ್ದು, ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್ ಕಳೆಸ ೨೦೨೩-೨೪ನೇ ಸಾಲಿನಲ್ಲಿ ರೂ. ೧೨ ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗವಾಗಿದೆ. ಮಾಹಿತಿ ಹಕ್ಕು ಹಾಗೂ ಪಂಚಾಯಿತಿಯ ಆಡಿಟ್ ವರದಿಯಲ್ಲಿ ಭ್ರಷ್ಟಾಚಾರ ಬಯಲಾಗಿದೆ ಎಂದು ಹೇಳಿದರು. ಆಡಿಟ್ ಸಂದರ್ಭ ಸುಮಾರು ೧೨,೪೭,೬೭೦ ರೂಪಾಯಿ ವ್ಯಯವಾಗಿರುವುದಕ್ಕೆ ಸೂಕ್ತ ಬಿಲ್‌ಗಳು, ವೋಚರ್‌ಗಳು ಇಲ್ಲ ಎಂಬುದಾಗಿ ವರದಿ ನೀಡಲಾಗಿದೆ. ನಂತರ ಮಾಹಿತಿ ಹಕ್ಕಿನಡಿ ಕೇಳಿದಾಗ ೧೩ ಬಿಲ್‌ಗಳು ಲಭ್ಯವಾಗಿವೆ. ಎಲ್ಲವೂ ನಕಲಿ ಬಿಲ್ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಸರ್ಕಾರದ ಹಣವನ್ನು ಸ್ವಂತಕ್ಕೆ ಬಳಸಿಕೊಳ್ಳಲಾಗಿದೆ. ಬಿಲ್‌ಗಳಲ್ಲಿ ಹೆಸರಿಸಿರುವ ಅಂಗಡಿಗಳೇ ಇಲ್ಲ. ಆದರೂ ಹಣ ಜಮೆಯಾಗಿದೆ. ಪಂಚಾಯಿತಿಯಿAದ ಜಮೆಯಾಗಿರುವ ಖಾತೆಗಳ ಬಗ್ಗೆ ತನಿಖೆ ನಡೆಯಬೇಕಿದೆ. ಶನಿವಾರಸಂತೆಯ ಅಂಗಡಿಯ ಬಿಲ್‌ನಲ್ಲಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಬಿಜಾಪುರದ ವ್ಯಕ್ತಿ ಮಾತನಾಡುತ್ತಿದ್ದಾರೆ ಎಂದು ವಿವರಿಸಿದರು. ಬಜೆಗುಂಡಿ ಗ್ರಾಮದ ನೀರು ಮತ್ತು ನೈರ್ಮಲ್ಯ ಖಾತೆಯಿಂದ ೧೨ ಲಕ್ಷಕ್ಕೂ ಅಧಿಕ ಹಣ ವಹಿವಾಟಾಗಿದೆ. ಬಲ್ಬ್ಗಳು, ಪೈಪ್‌ಗಳು, ವಯರ್‌ಗಳು, ಮೋಟಾರ್‌ಗಳು, ನೀರಿನ ಟ್ಯಾಂಕ್‌ಗಳ ಖರೀದಿ ಎಂದು ತಿಳಿಸಲಾಗಿದೆ. ಸಾವಿರಾರು ಬಲ್ಬ್ಗಳ ಖರೀದಿಗೆ ಹಣ ವಿನಿಯೋಗಿಸಲಾಗಿದೆ. ಆದರೆ ಇಡೀ ಗ್ರಾಮದಲ್ಲಿ ಸಾವಿರ ವಿದ್ಯುತ್ ಕಂಬಗಳೇ ಇಲ್ಲ ಎಂದು ಮಾಹಿತಿ ನೀಡಿದರು.
ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು. ಅಕ್ರಮದಲ್ಲಿ ಭಾಗಿಯಾಗಿ ರುವವರ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಯಾಕೂಬ್ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೂ ದೂರು ನೀಡಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿದ್ದ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ. ಕುಮಾರ್ ಮಾತನಾಡಿ, ಕೇವಲ ೨ ತಿಂಗಳ ಅವಧಿಯಲ್ಲಿಯೇ ೧೨ ಲಕ್ಷಕ್ಕೂ ಹಣ ದುರುಪ ಯೋಗವಾಗಿದೆ. ಇನ್ನು ನಾಲ್ಕೂವರೆ ವರ್ಷದಲ್ಲಿ ಎಷ್ಟು ಹಣ ದುರುಪಯೋಗವಾಗಿರಬಹುದು? ಎಂದು ಪ್ರಶ್ನಿಸಿದ ಅವರು, ಪಂಚಾಯಿತಿಯನ್ನು ತಕ್ಷಣ ಸೂಪರ್‌ಸೀಡ್ ಮಾಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬೇಳೂರು ಗ್ರಾ.ಪಂ. ಮಾಜೀ ಅಧ್ಯಕ್ಷ ಬಸವರಾಜು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಜೆ. ಸುನಿಲ್, ಮಹಿಳಾ ಕಾಂಗ್ರೆಸ್‌ನ ಚಂದ್ರಿಕಾ ಕುಮಾರ್ ಅವರುಗಳು ಉಪಸ್ಥಿತರಿದ್ದರು.