ಸೋಮವಾರಪೇಟೆ, ಜು. ೩೧: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಕಾರ್ಯಕಾರಿಣಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ನಡೆಯಿತು.
ತಾಲೂಕು ಘಟಕದ ಅಧ್ಯಕ್ಷ ಕೆ. ರತ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ವತಿಯಿಂದ ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಹಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅವರ ಬಳಿಯೇ ಹೋಗಿ ತಿಳಿದು ಪರಿಹಾರ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ತಾಲೂಕಿನ ಕಾರ್ಯಕಾರಿಣಿ ಸಭೆಗಳನ್ನು ಮುಂದಿನ ದಿನಗಳಲ್ಲಿ ಕ್ರಮವಾಗಿ ಶನಿವಾರಸಂತೆ, ಕುಶಾಲನಗರ ಮತ್ತು ಸೋಮವಾರ ಪೇಟೆಯಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ವೇತನದ ಸಮಸ್ಯೆ, ಟೈಂ ಬೌಂಡ್, ಇನ್‌ಕ್ರಿಮೆಂಟ್ ಇನ್ನಿತರ ಸಮಸ್ಯೆಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಇಲಾಖೆಯ ಉಪನಿರ್ದೇಶಕರನ್ನು ಭೇಟಿ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವಂತೆ ಚರ್ಚಿಸಲಾಯಿತು.
ಇದೇ ಸಂದರ್ಭ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಹೆಚ್.ಜಿ. ಕುಮಾರ್, ಕಾರ್ಯದರ್ಶಿ ಎಸ್.ಎಂ. ಮಹೇಂದ್ರ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡು ಪದಗ್ರಹಣ ನೆರವೇರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.